ಉಡುಪಿ: ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ಹಿಂದೆ ವಿದೇಶಿ ಕೈವಾಡ ಇದೆ ಹಾಗೂ ಫಂಡಿಂಗ್ ಮಾಡಲಾಗುತ್ತಿದೆ ಎಂಬ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಸಚಿವೆ ಕರಂದ್ಲಾಜೆ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವನ್ನು ಅಸ್ಥಿರಗೊಳಿಸುವಲ್ಲಿ ವಿದೇಶಿ ಕೈವಾಡ ಇದೆ ಎಂಬುದು ಸಚಿವೆ ಶೋಭಾ ಅವರ ಅಲ್ಪ ತಿಳುವಳಿಕೆ. ಆ ಕುರಿತು ತನಿಖೆ ನಡೆಸಬೇಕಾದ ಇಲಾಖೆಗಳು ಕೇಂದ್ರ ಸರಕಾರದ ಸುಪರ್ದಿಯಲ್ಲಿದೆ. ಕೇಂದ್ರ ಸಚಿವೆಯಾಗಿ ಅವರು ಈ ರೀತಿ ಹೇಳುವುದು ಅವರ ಅಲ್ಪತನದ ಪ್ರದರ್ಶನವಾಗುತ್ತದೆ ಎಂದರು.
ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳನ್ನು ಓರ್ವ ಮಹಿಳೆಯಾಗಿ ಕಂಡು ಸಮಸ್ಯೆ ಬಗ್ಗೆ ತಿಳಿದುಕೊಳ್ಳುವ ಬದಲು ಈ ರೀತಿಯ ಬಾಲಿಶ ಹೇಳಿಕೆ ಕೊಡುವುದು ಶೋಭೆ ಎನಿಸದು. ವಿದೇಶಿ ನೆರವಿನ ಬಗ್ಗೆ ತನಿಖೆ ನಡೆಸಲಿ ಎಂದು ಸವಾಲೆಸೆದರು.
ಕುಸ್ತಿಪಟುಗಳು ಒಲಿಂಪಿಕ್ ನಲ್ಲಿ ಪದಕ ಗಳಿಸಿದಾಗ ಚಾ ಪೇ ಚರ್ಚಾ ನಡೆಸಿ ಅಭಿನಂದಿಸಿದ್ದ ಪ್ರಧಾನಿ ಮೋದಿ ಈಗೇಕೆ ಮಾತನಾಡುವುದಿಲ್ಲ ಎಂದು ಶಾಸಕ ಭಂಡಾರಿ ಪ್ರಶ್ನಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ ನೀಡುವ ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಬಗೆಗಿನ ಉಸಾಬರಿ ಸಚಿವೆ ಶೋಭಾ ಅವರಿಗೆ ಬೇಡ. ಯೋಜನೆ ರೂಪಿಸಿದ ಕಾಂಗ್ರೆಸ್ ಗೆ ಗೊತ್ತು ಎಂದು ಕುಟುಕಿದರು.

