ಕಾಪು, : ಕಳೆದ ವಾರ ಕಾಪು ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಸರ ಕಿತ್ತು ಪರಾರಿಯಾದ ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಂಗಳವಾರ ಸಂಜೆ ಕಾಪು ಪೊಲೀಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಎಂ ಹಾಕೆ ಹೇಳಿದ್ದಾರೆ.
ಬಂಧಿತ ಆರೋಪಿಗಳು ಬಿ.ಸಿ ರೋಡ್‌ನ ಮೂಡಗ್ರಾಮದ ಗೂಡಿನಬೈಲು ನಿವಾಸಿ ಮುಹಮ್ಮದ್ ರಫೀಕ್ (೩೩) ಹಾಗೂ ಕೃಷ್ಣಾಪುರ ೮ನೇ ಬ್ಲಾಕ್‌ನ ಚೊಕ್ಕಬೆಟ್ಟು ಅಹಿಂಜಾ ಅಪಾರ್ಟ್ಮೆಂಟ್ ನಿವಾಸಿ ತೌಸಿಫ್ ಸಾಧಿಕ್ (೩೧) ಎಂದು ಗುರುತಿಸಲಾಗಿದೆ.
ಬಂದಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಎವೆಂಜರ್ ಬೈಕ್, ೩ ಮೊಬೈಲ್ ಪೋನ್, ೨,೫೦೦ ರೂ. ನಗದು, ಬಟನ್ ಇದ್ದ ಎರಡು ಚೂರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುಂಜಾರುಗಿರಿ ಸಮೀಪದ ಪಾಜಕದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಾಸು ಬಂದು, ಕಾಪು ಪಡು ಗ್ರಾಮದ ದರ್ಖಾಸು ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬ್ರಾಹ್ಮಣರತೋಟ ನಿವಾಸಿ ಶಕುಂತಳ ಜಿ. ಭಟ್ ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು.
ಬಂಧಿತ ಆರೋಪಿಗಳು ಅಂತರ್ ಜಿಲ್ಲಾ ಸರಗಳ್ಳರಾಗಿದ್ದು, ಆರೋಪಿಗಳು ನೀಡಿರುವ ಮಾಹಿತಿಯಂತೆ ಜೂ. ೧೨ರಂದು ಕಾಪುವಿನಲ್ಲಿ ಕಳವುಗೈದ ೬೪ ಗ್ರಾಂ ತೂಕದ ಎರಡು ಚಿನ್ನದ ಸರ, ಬ್ರಹ್ಮಾವರದಲ್ಲಿ ಕಳವಾಗಿರುವ ೩೨ ಗ್ರಾಂ ತೂಕದ ಚಿನ್ನದ ಸರ, ಮೇ ಮೇ ೭ರಂದು ಬೆಂಗಳೂರು ಮಹಾಲಕ್ಷ್ಮೀ ಪುರಂ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿರುವ ೪೦ ಗ್ರಾಂ ತೂಕದ ಚಿನ್ನದ ಸರ, ಮೇ ೨೭ರಂದು ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿರುವ ೭೫ ಗ್ರಾಂ ತೂಕದ ಎರಡು ಎಳೆಯ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಉಡುಪಿ ಪೊಲೀಸ್ ಅಧೀಕ್ಷಕ ಅಕ್ಷಯ್‌ಎಂ. ಹಾಕೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ಅವರ ನಿರ್ದೇಶನದಂತೆ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಅವರ ಮಾರ್ಗದರ್ಶನದಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ಅವರ ನೇತೃತ್ವದಲ್ಲಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ದಿನಕರ್ ಪಿ.ಕೆ., ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಎಂ., ಹಿರಿಯಡಕ ಎಸೈ ಮಂಜುನಾಥ ಮರಬಂದ, ಕಾಪು ಎಸೈ ಶ್ರೀಶೈಲ ಮುರಗೋಡ, ಭರತೇಶ್ ಕಂಕಣವಾಡಿ ಸಹಕಾರದೊಂದಿಗೆ ಅಪರಾಧ ಪತ್ತೆ ತಂಡದ ಪ್ರವೀಣ್ ಕುಮಾರ್, ರಾಜೇಶ್, ನಾರಾಯಣ್, ಸಂದೇಶ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯ ಆರ್‌ಡಿಸಿ ವಿಭಾಗದ ದಿನೇಶ್ ಮತ್ತು ನಿತಿನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಅಪರಾಧ ವಿಭಾಗದ ಸಿಬಂದಿಗಳಾದ ಪ್ರವೀಣ್ ಕುಮಾರ್, ರಾಜೇಶ್, ನಾರಾಯಣ್, ಸಂದೇಶ್, ಆರ್‌ಡಿಸಿ ವಿಭಾಗದ ದಿನೇಶ್ ಮತ್ತು ನಿತಿನ್ ಅವರ ಕ್ಷಿಪ್ರ ಗತಿಯ ಕಾರ್ಯಾಚರಣೆಯಿಂದಾಗಿ ಸರಗಳ್ಳರ ಬಂಧನವಾಗಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರಿಗೆ ನಗದು ಮತ್ತು ಪ್ರಶಂಸ ಪತ್ರ ನೀಡಿ ಗೌರವಿಸಲಾಗುವುದು ಎಂದೂ ಪೋಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

