ಸರ್ವಿಸ್ ರಸ್ತೆ ಮಧ್ಯೆಯೇ ಎಕ್ಸ್ ಪ್ರೆಸ್ ಬಸ್ ನಿಲುಗಡೆ : ಸಾರ್ವಜನಿಕರು, ರಿಕ್ಷಾ ಚಾಲಕರಿಂದ ತರಾಟೆ
ಪೊಲೀಸರಿಂದ, ರಿಕ್ಷಾ ಚಾಲಕರು, ಸಾರ್ವಜನಿಕರಿಂದ ತೀವ್ರ ತರಾಟೆ
(Padubidri) ಪಡುಬಿದ್ರಿ : ಎಕ್ಸ್ ಪ್ರೆಸ್ ಬಸ್ಸೊಂದು ಸರ್ವಿಸ್ ರಸ್ತೆ ಮಧ್ಯೆ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುತ್ತಿದ್ದ ಸಂದರ್ಭ ಇತರ ವಾಹನಗಳಿಗೆ ತೊಂದರೆಯಾಗಿ ಸಾರ್ವಜನಿಕರು ಮತ್ತು ರಿಕ್ಷಾ ಚಾಲಕರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ಪಡುಬಿದ್ರಿ ಜಂಕ್ಷನ್ ಸಮೀಪ ಭಾನುವಾರ ಘಟಿಸಿದೆ.
ಭಾನುವಾರ ವಾದ್ದರಿಂದ ಮೊದಲೇ ವಾಹನ ಸಂಚಾರ ಅಧಿಕವಿದ್ದ ಸಂದರ್ಭ ಮಂಗಳೂರು-ಉಡುಪಿ ಸರ್ವಿಸ್ ರಸ್ತೆಯಲ್ಲಿ ಎಕ್ಸ್ ಪ್ರೆಸ್ ಬಸ್ಸೊಂದು ಬಸ್ ನಿಲ್ದಾಣ ದಾಟಿ ಸಂಚಾರ ದಟ್ಟಣೆ ಅಧಿಕವಿದ್ದ ಜಾಗದಲ್ಲಿ ಪ್ರಯಾಣಿಕರಿಗೆ ನಿಲ್ಲಿಸಿದ್ದರಿಂದ ಟ್ರಾಫಿಕ್ ಸಮಸ್ಯೆಯಾಯಿತು.
ಅದೇ ಸಂದರ್ಭ ಟ್ರಾಫಿಕ್ ನಿರ್ವಹಣೆಗೆ ಸ್ಥಳದಲ್ಲಿದ್ದ ಪೋಲಿಸರು ಮುಂದೆ ಚಲಿಸಲು ಬಸ್ ಚಾಲಕನಿಗೆ ಸೂಚಿಸಿದರೂ ಆತ ಪ್ರಯಾಣಿಕರನ್ನು ಹತ್ತಿಸಲು ಮುಂದಾಗಿದ್ದಾನೆ. ಪೋಲಿಸರು ಮುಂದೆ ಚಲಿಸಲು ಸೂಚಿಸಿದರೂ ಆತ ಕ್ಯಾರೇ ಎನ್ನಲಿಲ್ಲ. ಪೋಲಿಸರು ನಿಲ್ಲಿಸಲು ಸೂಚಿಸುತ್ತಾರೆ. ಪೋಲಿಸರ ಸೂಚನೆ ದಿಕ್ಕರಿಸಿ ಬಸ್ ಮುಂದೆ ತೆರಳುತ್ತಿದ್ದಾಗ ತಕ್ಷಣ ಸ್ಥಳದಲ್ಲಿ ಜಮಾಯಿಸಿದ ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡರು. ಕ್ಷಣ ಕಾಲ ಇತರ ವಾಹನ ಸವಾರರಿಗೂ ತೊಂದರೆಯಾಯಿತು.
ಪಡುಬಿದ್ರಿಯ ಅಗಲ ಕಿರಿದಾದ ರಾಷ್ಟ್ರೀಯ ಹೆದ್ದಾರಿಯ ಜೊತೆಗೆ ಎದುರು ಬದುರು ಘನ ವಾಹನಗಳು ಬಂದರೆ ಹರಸಾಹಸ ಪಡಬೇಕಾದ ಸರ್ವೀಸ್ ರಸ್ತೆಯಲ್ಲಿ ಪಡುಬಿದ್ರಿ ಪೋಲಿಸರ ನಿಯಮದಂತೆ ಪ್ರಯಾಣಿಕರನ್ನು ಬಸ್ ನಿಲ್ದಾಣದಲ್ಲಿಯೇ ಇಳಿಸುವ ಮತ್ತು ಹತ್ತಿಸುವ ಕಾರ್ಯ ಮಾಡಬೇಕಿದೆ. ಇದು ಜನರಿಗೂ ಅನ್ವಯವಾಗುತ್ತದೆ. ಆದರೆ ಕೆಲವೊಮ್ಮೆ ಪ್ರಯಾಣಿಕರು ಜಂಕ್ಷನ್ ಬಳಿ ನಿಲ್ಲಿಸುವಾಗ ನಿಲ್ಲುವ ಬಸ್ಸುಗಳಿಂದ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತದೆ.
ಖಾಸಗಿ ಬಸ್ ಗಳ ಆಟಾಟೋಪಕ್ಕೆ ಬ್ರೇಕ್ ಬೀಳಬೇಕಾದರೆ ಕಠಿಣ ಕ್ರಮ ಅಗತ್ಯವಿದೆಯೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

