ಉಡುಪಿ: ಕಾಪು ತಾ| ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಅವರಿಗೆ ಹುಟ್ಟೂರ ಸಮ್ಮಾನ ಕಾರ್ಯಕ್ರಮವು ಹೆಜಮಾಡಿಯ ಹಿ. ಪ್ರಾ. ಶಾಲಾ ಸಭಾಭವನದಲ್ಲಿ ನಡೆಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ ವೇ| ಮೂ| ಕಮಲಾದೇವಿ ಪ್ರಸಾದ ಆಸ್ರಣ್ಣರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಶೀರ್ವಚನ ನೀಡಿದರು.
ಈ ಸಮಾರಂಭದಲ್ಲಿಯೂ ಧರ್ಮ ಸಮನ್ವಯತೆ ಮೆರೆದಿದೆ. ಹರೀಶ ನಾಮದಲ್ಲಿಯೇ ಸಮನ್ವತೆಯ ಸಂಕೇತವಾದ ಹರಿ ಹಾಗೂ ಈಶರಿದ್ದಾರೆ. ಪತ್ರಿಕೆಗಳು ಏನನ್ನಾದರೂ ಸಾಧಿಸಬಹುದಾಗಿದೆ. ಪತ್ರಿಕೆಗಳು ದೂರಿದಾಗ ನಮ್ಮಲ್ಲಿನ ಸಾಕ್ಷೀಪ್ರಜ್ಞೆ ಜಾಗೃತವಾಗುತ್ತದೆ. ಆಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯವೆಂದರು.
ಧರ್ಮಗುರುಗಳೂ, ಕನ್ನಂಗಾರ್ ಜುಮ್ಮಾ ಮಸೀದಿಯ ಖತೀಬರಾದ ಅಶ್ರಫ್ ಸಖಾಫಿ ಕಿನ್ಯ, ಕಾರ್ನಾಡು ಚರ್ಚಿನ ರೆ| ಫಾ| ಸಿಲ್ವೆಸ್ಟರ್ ಡಿ’ಕೋಸ್ಟ ಅಶೀರ್ವದಿಸಿದರು.
ಹರೀಶ್ ಹೆಜಮಾಡಿ ಅವರನ್ನು ಸಮ್ಮಾನಿಸಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ಶುಭವನ್ನು ಹಾರೈಸಿದರು.
ಉಧ್ಯಮಿ ರಾಲ್ಫಿ ಡಿ’ ಕೋಸ್ಟ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ರೇಶ್ಮಾ ಎ. ಮೆಂಡನ್, ಉಪಾಧ್ಯಕ್ಷ ಮೋಹನ್ ಸುವರ್ಣ, ಮಾಜಿ ಅಧ್ಯಕ್ಷ ಪಾಂಡುರಂಗ ಕರ್ಕೆರ, ಉದ್ಯಮಿ, ಶಿಕ್ಷಣ ಪ್ರೇಮಿ ಶೇಖಬ್ಬ ಕೋಟೆ ಮತ್ತಿತರರಿದ್ದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷರನ್ನು ಹೆಜಮಾಡಿಯ ಸಾರ್ವಜನಿಕರ ಪರವಾಗಿ ಸಮ್ಮಾನಿಸಲಾಯಿತು.
ವಾಮನ್ ಕೋಟ್ಯಾನ್ ಸ್ವಾಗತಿಸಿದರು. ಶೇಖರ ಹೆಜಮಾಡಿ ಪ್ರಾಸ್ತಾವಿಸಿದರು. ದಿವಾಕರ ಹೆಜಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಸನಾ ಇಬ್ರಾಹಿಂ ವಂದಿಸಿದರು.

