ಹೆಜಮಾಡಿ: ಪೊಲೀಸರಿಗೆ ದನಗಳ್ಳರ ಕಾರು ಡಿಕ್ಕಿ, ಮೂವರಿಗೆ ಗಾಯ, ಓರ್ವ ಸೆರೆ
(Hejamady) ಹೆಜಮಾಡಿ, ಆ. ೫: ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದನಗಳ್ಳತನದ ಆರೋಪಿಗಳನ್ನು ಬಂಧಿಸಲು ಮಂಗಳವಾರ ಮುಂಜಾನೆ ಆಗಮಿಸಿದ್ದ ಕರ್ತವ್ಯ ನಿರತ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ ಹೆಜಮಾಡಿ ಟೋಲ್ ಗೇಟಿನ ಮೂರನೇ ದ್ವಾರದಲ್ಲಿ ದನಗಳ್ಳರು ತಾವು ಕಳ್ಳತನ ಮಾಡಿ ದನಗಳನ್ನು ಉಸಿರುಗಟ್ಟಿಸುವ ರೀತಿಯಲ್ಲಿ ಹಾಕಿ ಸಾಗಿಸುತ್ತಿದ್ದ ಫಾರ್ಚೂನರ್ ಕಾರು ಡಿಕ್ಕಿ ಹೊಡೆದು ಗಾಯಗಳಾಗಿವೆ.
ಕಾರು ಚಾಲಕ ಆರೋಪಿ ಮಹಮ್ಮದ್ ಶಾರೋಜ್ ಸುರತ್ಕಲ್ (೨೯) ಎಂಬಾತನನ್ನು ಪೊಲೀಸರು ಬಂಧಿಸಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಗಂಗೊಳ್ಳಿ ಠಾಣಾ ಪೊಲೀಸ್ ಉಪ ನಿರೀಕ್ಷಕ(ತನಿಖೆ) ಬಸವರಾಜ್ ಕನಶೆಟ್ಟಿ ಮತ್ತು ಪಿಸಿ ಸಂದೀಪ್ ಅವರು ಪ್ರಕರಣದಲ್ಲಿ ಗಾಯಗೊಂಡ ಪೊಲೀಸ್ ಸಿಬಂದಿಗಳಾಗಿದ್ದಾರೆ. ಟೋಲ್ ಪೆಟ್ರೋಲಿಂಗ್ ವಾಹನ ಚಾಲಕ ಲೋಹಿತ್ ಎಂಬವರಿಗೂ ಗಾಯಗಳಾಗಿವೆ.
ಆರೋಪಿಗಳು ಒಂದು ಟೋಲ್ ಪೆಟ್ರೋಲಿಂಗ್ ವಾಹನ ಮತ್ತು ಖಾಸಗಿ ವಾಹನಗಳಿಗೆ ಢಿಕ್ಕಿ ಹೊಡೆಯುತ್ತಲೇ ಸಿನಿಮೀಯ ಮಾದರಿಯಲ್ಲಿ ಫಾರ್ಚೂನರ್ ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಜಿಲ್ಲಾದ್ಯಂತ ಕಾರಿನ ಪತ್ತೆಗಾಗಿ ನಾಕಾಬಂದಿ ಏರ್ಪಡಿಸಲಾಗಿದೆ.
ಇಂದು ಮುಂಜಾನೆಯ ಈ ಘಟನೆಗೆ ಸಂಬಂಧಿಸಿ ಖಾಸಗಿ ಕಾರಲ್ಲಿ ಬಂದಿದ್ದ ಗಂಗೊಳ್ಳಿ ಪೊಲೀಸ್ ಸಿಬ್ಬಂದಿ ಫಾರ್ಚೂನರ್ ಕಾರನ್ನು ಸುತ್ತುವರಿದು ಆರೋಪಿಗಳಾದ ಶಾರೋಜ್ ಸೇರಿದಂತೆ ಸಫ್ವಾನ್ ಕಾಪು, ಅಜೀಮ್ ಕಾಪು ಮತ್ತು ರಾಜಿಕ್ ಬಜ್ಪೆ ಅವರನ್ನು ವಶಕ್ಕೆ ಪಡೆಯಲು ಹೋದಾಗ “ಇವರನ್ನು ಬಿಡಬಾರದು” ಎಂದು ಕೊಲ್ಲುವ ಉದ್ದೇಶದಿಂದ ಪೊಲೀಸರ ಮೇಲೆಯೇ ಬೊಲೇರೋ ಹಾಯಿಸಿಕೊಂಡು ಹೋಗಲು ಹೇಳಿದಾಗ ಚಾಲಕ ಶಾರೋಜ್ ಕಾರನ್ನು ಪಿಎಸ್‌ಐ ಬಸವರಾಜ್ ಕನಶೆಟ್ಟಿ ಅವರಿಗೆ ಢಿಕ್ಕಿ ಹೊಡೆದು ಬೀಳಿಸಿ ಅವರ ಕೈ ಮೇಲಿಂದ ಕಾರನ್ನು ಹರಿಸಿದ್ದ.
ಮುಂಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸು ಮತ್ತು ಬೊಲೆನೋ ಕಾರುಗಳಿದ್ದು, ಒಮ್ಮೆಲೇ ಹಿಂದಕ್ಕೆ ಕಾರನ್ನು ಚಲಾಯಿಸಿದಾಗ ಪಿಸಿ ಸಂದೀಪ್‌ಗೂ ಗಾಯಗಳಾಗಿದ್ದವು.
ಟೋಲ್ ಪೆಟ್ರೋಲಿಂಗ್ ವಾಹನಕ್ಕೆ ಮತ್ತೆ ಕಾರು ಢಿಕ್ಕಿಯಾದಾಗ ಆ ವಾಹನದ ಚಾಲಕ ಲೋಹಿತ್ ಎಂಬವರಿಗೂ ಗಾಯಗಳಾಗಿದ್ದವು. ಹಿಮ್ಮುಖವಾಗಿ ಚಲಿಸಿದ ಟೋಲ್ ವಾಹನವು ಅದರ ಹಿಂಬದಿಯಿದ್ದ ಪಿಎಸ್‌ಐ ಪವನ್ ನಾಯಕ್(ಕಾ. ಸು) ಅವರ ಕಾರಿಗೂ ಢಿಕ್ಕಿಯಾಗಿತ್ತು. ಈ ನಡುವೆ ಅಲ್ಲಿದ್ದ ಪೊಲೀಸರು ಫಾರ್ಚೂನರ್ ಚಾಲಕ ಶಾರೋಜ್‌ನನ್ನು ವಶಕ್ಕೆ ಪಡೆದಿದ್ದರು.
ಈ ಮಧ್ಯೆ ಕಾರಿನ ಎಡಬದಿ ಸೀಟಲ್ಲಿದ್ದ ಮತ್ತೋರ್ವ ಆರೋಪಿಯು ಚಾಲಕನಾಗಿ ಎದುರು ಬದಿಯಲ್ಲಿದ್ದ ಖಾಸಗಿ ಬೊಲೆನೋ ಕಾರಿಗೆ ಮತ್ತೊಮ್ಮೆ ಗುದ್ದಿ, ಅದನ್ನು ದೂಡಿಕೊಂಡು ಸಾಗುತ್ತಾ, ಅಲ್ಪಸ್ವಲ್ಪ ಸ್ಥಳಾವಕಾಶದಲ್ಲಿ ಕಾರನ್ನು ಚಲಾಯಿಸುತ್ತಾ ತನ್ನವರೊಂದಿಗೆ ಪರಾರಿಯಾಗಿದ್ದ.
ಕರ್ತವ್ಯ ನಿರತ ಪೊಲೀಸರ ಪ್ರಾಣಹಾನಿಗೆ ಯತ್ನಿಸಿದ್ದ ಮತ್ತು ಸಾರ್ವಜನಿಕ ಸೊತ್ತು ನಾಶಗೈದ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಉನ್ನತ ತನಿಖೆ ನಡೆಯುತ್ತಿದೆ.

