5 ಕೋಟಿ ರೂ. ಮಾನನಷ್ಟ ಪರಿಹಾರ ಕೋರಿ ಪ್ರತಿಸ್ಪರ್ಧಿಗೆ ನೋಟಿಸ್ ನೀಡಿದ ಮಾಜಿ ಸಚಿವ ಮರುಗೇಶ್ ನಿರಾಣಿ
ಬೆಂಗಳೂರು: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ತಮ್ಮ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ, ಭಾಷಣ ಮಾಡಿದ್ದ ಯಲ್ಲಪ್ಪ ಹೆಗಡೆ ವಿರುದ್ದ ಮಾಜಿ ಸಚಿವ ಮರುಗೇಶ್ ನಿರಾಣಿ ಮಾನಹಾನಿ ದೂರು ದಾಖಲಿಸಲು ಮುಂದಾಗಿದ್ದಾರೆ. ಈಗಾಗಲೇ ಲೀಗಲ್ ನೋಟಿಸ್ ಜಾರಿಗೊಳಿಸಿದ್ದಾರೆ.
ಬೀಳಗಿ ಕ್ಷೇತ್ರದಿಂದ ರೈತ ಸಂಘದ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಲ್ಲಪ್ಪ 2023ರ ಫೆಬ್ರವರಿ, ಮಾರ್ಚ್, ಮೇಯಲ್ಲಿ ಮಾಡಿದ್ದ ಪೋಸ್ಟ್ ಮತ್ತು ಭಾಷಣ ಈಗ ಅವರಿಗೆ ಸಂಕಷ್ಟ ತಂದೊಡ್ಡಿದೆ. ಅದೇ ಕ್ಷೇತ್ರದಲ್ಲಿ ನಿರಾಣಿ ಬಿಜೆಪಿ ಅಭ್ಯರ್ಥಿಯಾಗಿದ್ದರು.
ನಿರಾಣಿ ಅಲಾರಾಂ, ಸಕ್ಕರೆ, ಸೀರೆ, ಆರತಿ ಸೆಟ್ ಹಂಚಿದ್ದಾರೆ. ಸಕ್ಕರೆ ಕಾರ್ಖಾನೆ ತೆರಿಗೆ ಕಟ್ಟಿಲ್ಲ ಎಂದೆಲ್ಲ ಯಲ್ಲಪ್ಪ ಭಾಷಣ ಮಾಡಿದ್ದಾರೆ, ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆಗಸ್ಟ್ 16ರಂದು ನೋಟಿಸ್ ಕಳುಹಿಸಲಾಗಿದೆ.
5 ಕೋಟಿ ರೂ. ಪರಿಹಾರ ಕೇಳಿ ಮಾನಹಾನಿ ನೋಟಿಸ್ ಜಾರಿ ಮಾಡಲಾಗಿದೆ. ಭಾಷಣ ಮತ್ತು ಫೇಸ್ ಬುಕ್ ಪೋಸ್ಟ್ ನಿಂದ ದೈಹಿಕ ಮತ್ತು ಮಾನಸಿಕ ಆಘಾತವಾಗಿದ್ದು, ಹೀಗಾಗಿ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಮೂಲಕ ಯಲ್ಲಪ್ಪ ಕ್ಷಮೆ ಕೋರಬೇಕು. ಜೊತೆಗೆ ಮಾನಹಾನಿ ಪರಿಹಾರಾರ್ಥವಾಗಿ 5 ಕೋಟಿ ರೂ. ನೀಡಬೇಕು. 1 ವಾರದೊಳಗೆ ಷರತ್ತು ಈಡೇರಿಸದಿದ್ದರೆ ದೂರು ದಾಖಲಿಸುವುದಾಗಿ ನಿರಾಣಿ ಪರ ವಕೀಲ ಟಂಕಸಾಲಿ ಎಚ್ಚರಿಕೆ ನೀಡಿದ್ದಾರೆ.

