ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯೋತ್ಸವ, ಯೋಧ ನಮನ ಕಾರ್ಯಕ್ರಮ
(Adamaru) ಅದಮಾರು: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳಲ್ಲಿ ಇಂದು 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ಯೋಧ ನಮನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾಗವಹಿಸಿದ್ದ ಅದಮಾರು ಪೂರ್ಣಪ್ರಜ್ಞಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ ಆಗಿರುವ ಪ್ರಸ್ತುತ ಮಣಿಪಾಲ ಕೆಎಂಸಿಯಲ್ಲಿ ಉದ್ಯೋಗ ಮಾಡುತ್ತಿರುವ ಮಾಜಿ ಸೈನಿಕ ಅನಂತರಾಮ್ ರಾವ್ ಅವರು ಮುಖ್ಯ ಅತಿಥಿಯಾಗಿ ಯೋಧ ನಮನ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಎಲ್ಲಾ ಅತಿಥಿ ಗಣ್ಯರು ಯೋಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮಾಜಿ ಸೈನಿಕ ಅನಂತರಾಮ್ ರಾಮ್ ಮಾತನಾಡಿ, ಕಾರ್ಗಿಲ್ ಯುದ್ಧ ಎನ್ನುವುದು ನನ್ನ ಜೀವನದ ಮರೆಯಲಾಗದ ಒಂದು ಯುದ್ದಧಾನಿಭವವಾಗಿದೆ. ನಾನು ಮಿಲಿಟರಿಗೆ ಸೇರಿ ಒಂದೇ ವರ್ಷದಲ್ಲಿ ಕಾರ್ಗಿಲ್ ಯುದ್ಧ ಪ್ರಾರಂಭವಾದ ಕಾರಣ ಅದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. 24 ವರ್ಷಗಳ ಕಾಲ ಮಿಲಿಟರಿಯಲ್ಲಿ ತೊಡಗಿಸಿಕೊಳ್ಳುವ ಸುಯೋಗ ದೊರಕಿದೆ. ದೇಶ ಸೇವೆ ಮಾಡುವ ಅವಕಾಶ ಸಿಕ್ಕಾಗ ಅದನ್ನು ಬಿಡಬಾರದು. ಯೋಧರಾಗುವ ಯೋಗ ಎಲ್ಲರಿಗೂ ಸಿಗುವುದಿಲ್ಲ. ಕೇವಲ ಇಂಜಿನಿಯರ್ ಡಾಕ್ಟರ್ ಆಗುವ . ಕನಸು ಮಾತ್ರ ಕಾಣುವುದಕ್ಕೆ ಬದಲಾಗಿ ಯೋಧನಾಗುವ ಆಸೆ ಇರಬೇಕು. ನಾನು ಇಂದು ನಿಮ್ಮ ಮುಂದೆ ನಿಂತಿದ್ದರೆ, ಅದಕ್ಕೆ ಈ ಸಂಸ್ಥೆಯ ಹಿಂದಿನ ಶಿಕ್ಷಕರು ಕಲಿಸಿಕೊಟ್ಟ ಮಾರ್ಗವೇ ಸರಿ ಎಂದು ತಮ್ಮ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅನೇಕ ರೋಚಕ ಅನುಭವಗಳನ್ನು ಹಂಚಿಕೊಂಡರು.
ಆಡಳಿತ ಮಂಡಳಿಯ ಪ್ರತಿನಿಧಿ ಪ್ರೊ. ನಿತ್ಯಾನಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು
ಅವರು ಮಾತನಾಡಿ, ನಮ್ಮ ಸುಯೋಗದಿಂದ ಇಂದು ಸೈನಿಕರಾಗಿದ್ದ ಅನಂತರಾಮರವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ನಾವು ಕೇವಲ ಸಿನಿಮಾ ಕಲಾವಿದರನ್ನು ಅಥವಾ ಕ್ರಿಕೆಟ್ ಪಟುಗಳನ್ನು ನಮ್ಮ ನೆಚ್ಚಿನ ನಾಯಕರನ್ನಾಗಿ ಆರಾಧಿಸುವುದರ ಬದಲಾಗಿ ನಮ್ಮ ದೇಶ ಕಾಯುವ ಯೋಧರನ್ನು ನಮ್ಮ ಮನೆಯಲ್ಲಿ ಭಾವಚಿತ್ರ ಇಟ್ಟು ಆದರ್ಶವಾಗಿ ಇಟ್ಟುಕೊಳ್ಳಬೇಕು. ಅವರ ಮಾರ್ಗವನ್ನು ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯಕ್, ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್, ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಏ ವಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕುಮಾರಿ ಸಿಂಚನ ಸ್ವಾಗತಿಸಿದರು. ಕು. ಚರಣ್ಯ ಕಾರ್ಯಕ್ರಮ ನಿರ್ವಹಿಸಿದರು. ಯಶಸ್ವಿ ಧನ್ಯವಾದ ಸಲ್ಲಿಸಿದರು.

