ಎರ್ಮಾಳು ಕುದ್ರೊಟ್ಟು ಗರಡಿ ಆಯೋಜನೆಯಲ್ಲಿ ಕಂಡೊಡೊಂಜಿ ದಿನ ಕಾರ್ಯಕ್ರಮ
ಪಡುಬಿದ್ರಿ, ಜು. 28: ತುಳುನಾಡಿನ ಜನರು ಆಟಿ ತಿಂಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಸಂತಸದ ವಿಷಯ. ಇದು ತುಳುವರ ಸಂಸ್ಕೃತಿಯ ಬಗೆಗಿನ ಕಾಳಜಿ ತೋರಿಸುತ್ತದೆ ಎಂದು ಕುದ್ರೊಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗರವರು ಹೇಳಿದರು.
ಅವರು ಬಿಲ್ಲವರ ಯೂನಿಯನ್ ಕುದ್ರೊಟ್ಟು, ಶ್ರೀ ಬ್ರಹ್ಮ ಬೈದರ್ಕಳ ಗರಡಿ ಎರ್ಮಾಳು ಬಡಾ, ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆ ಮತ್ತು ಬೈದಶ್ರೀ ಮಹಿಳಾ ಮಂಡಳಿ ಎರ್ಮಾಳು ಬಡಾ ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಬಡಕೊಟ್ಟು ಬಾಕಿಮಾರು ಗದ್ದೆಯಲ್ಲಿ ರವಿವಾರ ಜರಗಿದ ಕಂಡೊಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜ ಸೇವಕ ನಿತ್ಯಾನಂದ ಶೆಟ್ಟಿ ಎರ್ಮಾಳು ಬಡಾ ಮಾತನಾಡಿ, ಯಾವುದೇ ಕಾರ್ಯಕ್ರಮಗಳನ್ನು ಆರಂಭಿಸುವುದು ಸುಲಭ. ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಸಂಘಟನೆಗಳ ಕರ್ತವ್ಯ. ಇಂತಹ ಕಾರ್ಯಕ್ರಮಗಳ ಮೂಲಕ ಕೃಷಿಯ ಮಹತ್ವವನ್ನೂ ಯುವ ಜನಾಂಗಕ್ಕೆ ಮನವರಿಕೆ ಮಾಡಬೇಕಾಗಿದೆ ಎಂದರು.
ಬಿಲ್ಲವರ ಯೂನಿಯನ್ ಕುದ್ರೊಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಸುಖೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಬೈದರ್ಕಳ ದರ್ಶನ ಪಾತ್ರಿ ರವಿ ಪೂಜಾರಿ ಕುರ್ಕಾಲು, ಎರ್ಮಾಳು ಶ್ರೀ ನಂದಿಕೇಶ್ವರ ದೇವಸ್ಥಾನದ ಅರ್ಚಕ ಬಾಲಕೃಷ್ಣ ಭಟ್, ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆಯ ಅಧ್ಯಕ್ಷ ಸತೀಶ್ ಪೂಜಾರಿ ಮೂಡಬೆಟ್ಟು, ಎರ್ಮಾಳು ಬಡಾ ಬೈದಶ್ರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಸಬಿತ ಸೋಮನಾಥ, ಆಡಳಿತ ಸಮಿತಿ ಕಾರ್ಯದರ್ಶಿ ರಮೇಶ್ ಅಂಚನ್, ಹಿರಿಯರಾದ ಶಂಕರ ಪೂಜಾರಿ, ಉದ್ಯಮಿ ಕರುಣಾಕರ ಪೂಜಾರಿ, ಪತ್ರಕರ್ತ ಬಾಲಕೃಷ್ಣ ಪೂಜಾರಿ, ಅಡ್ವೆ ಗರಡಿಯ ರಾಮ ಪೂಜಾರಿ, ಕರುಣಾಕರ ಕೋಟ್ಯಾನ್, ದೀನೇಶ್ ಸುವರ್ಣ, ಕೃಷ್ಣ ಕುಮಾರ್ ಪೊಲ್ಯ, ಮಮತಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ವಾಲಿಬಾಲ್ ಪುರುಷ ಮತ್ತು ಮಹಿಳೆಯರಿಗೆ, ತ್ರೋಬಾಲ್, ಹಗ್ಗ ಜಗ್ಗಾಟ ಮಹಿಳೆ ಮತ್ತು ಪುರುಷರಿಗೆ, ಮ್ಯೂಸಿಕ್ ಚೆಯರ್, ಒಂಟಿ ಕಾಲಿನ ಓಟ, ಮಡಕೆ ಒಡೆಯುವ ಸ್ಪರ್ಧೆ ಸಹಿತ ಹತ್ತು ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಮಹಿಳೆಯರು, ಪುರುಷರು ಮತ್ತು ಮಕ್ಕಳು ಕೆಸರುಗದ್ದೆ ಕ್ರೀಡಾ ಕೂಟದಲ್ಲಿ ಭಾಗವಹಿದ್ದಾರೆ.
ಮನೋಹರ್ ಕುಮಾರ್, ಉಚ್ಚಿಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
