ಸ್ಥಳೀಯರಿಂದ ಮೀನುಗಾರಿಕೆಗೆ ತೆರಳಿ ಸಮುದ್ರ ಪಾಲಾದ ಯುವಕನ ರಕ್ಷಣೆ
(Kaup) ಕಾಪು : ಸಾಂಪ್ರದಾಯಿಕ ಮೀನುಗಾರಿಕೆಗೆ ಬಲೆ ಇಡಲು ಸಮುದ್ರಕ್ಕೆ ಹೋಗಿ, ಸಮುದ್ರ ಪಾಲಾಗುವ ಭೀತಿಗೊಳಗಾದ ಯುವಕನನ್ನು ಸ್ಥಳೀಯರು ರಕ್ಷಿಸಿದ ಘಟನೆ ರವಿವಾರ ಕಾಪು ಬೀಚ್ ನಲ್ಲಿ ನಡೆದಿದೆ.
ಕಾಪು ಪಡುಗ್ರಾಮದ ನಿವಾಸಿ ಸಚಿನ್ (31) ಸ್ಥಳೀಯ ಮೀನುಗಾರರಿಂದ ರಕ್ಚಿಸಲ್ಪಟ್ಟ ಯುವಕ.
ರವಿವಾರ ರಜಾ ದಿನವಾಗಿದ್ದು, ಸಾಂಪ್ರದಾಯಿಕ ಮೀನುಗಾರಿಕೆಗಾಗಿ ಬಲೆ ಇಡಲೆಂದು ಬಲೆಯೊಂದಿಗೆ ತೆರಳಿದ್ದ ಸಚಿನ್ ಸಮುದ್ರದಲ್ಲಿ ಮುಳುಗಿ, ಸಮುದ್ರ ಪಾಲಾಗುವ ಭೀತಿ ಎದುರಾಗಿತ್ತು.
ಇದನ್ನು ಗಮನಿಸಿದ ಸ್ಥಳೀಯರು ಬೊಬ್ಬೆ ಹಾಕಿದ್ದು, ಮೀನುಗಾರಿಕಾ ವೃತ್ತಿ ನಿರತರಾದ ಶರ್ಮಾ, ಹರೀಶ್ ಕರ್ಕೇರ ಅವರು ಸಮುದ್ರಕ್ಕೆ ಇಳಿದು ಯುವಕನ ಜೀವ ರಕ್ಷಿಸಿದ್ದಾರೆ.
ಯುವಕನನ್ನು ರಕ್ಷಿಸಿ ಮೇಲಕ್ಕೆ ಕರೆ ತರುವಾಗ ರಕ್ಷಣಾ ದೋಣಿ ಕೂಡಾ ಮಗುಚಿ ಬಿದ್ದಿದ್ದು, ಈ ವೇಳೆ ಕಾಪು ಬೀಚ್‌ನಲ್ಲಿರುವ ಲೈಫ್ ಗಾರ್ಡ್‌ಗಳು ಅವರ ರಕ್ಷಣೆಗೆ ಧಾವಿಸಿದ್ದು, ಸ್ಥಳೀಯ ಮೀನುಗಾರರಾದ ಬಾಲಕೃಷ್ಣ, ಲೋಕೇಶ್, ಶಿವಾಜಿ ಹಾಗೂ ಕರಾವಳಿ ಕಾವಲು ಪಡೆ ರಕ್ಷಕರು ಸಹಕಾರದೊಂದಿಗೆ ಮೇಲಕ್ಕೆ ಕರೆತಂದು ಯುವಕನ ಪ್ರಾಣ ರಕ್ಷಣೆಗೆ ನೆರವಾಗಿದ್ದಾರೆ.
