ಕೋತಲ್ ಕಟ್ಟೆಯಲ್ಲಿ ಭೀಕರ ಅಪಘಾತ ಐವರು ಸಾವು, ನಾಲ್ವರು ಗಂಭೀರ
ಬಿಕ್ಕೋ ಕಂಪನಿ ಎದುರು ರಾಹೆ 66 ರಲ್ಲಿ ನಡೆದ ಘಟನೆ
(Kaup) ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೋತಲಕಟ್ಟೆ ಬಿಕ್ಕೋ ಕಂಪನಿ ಎದುರು ಈವೆಂಟ್ ಗೆ ತೆರಳುತ್ತಿದ್ದ ಮಿನಿ ಟೆಂಪೋ ಪಲ್ಟಿಯಾಗಿ ಐವರು ಮೃತಪಟ್ಟು ಮೂವರು ತೀವ್ರ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ಘಟಿಸಿದೆ.
ಕಾಪುವಿನ ಪ್ರಸನ್ನ ಎಂಬವರ ಮಾಲಕತ್ವದ ಈವೆಂಟ್ ಗೆ ಕಾಪುವಿನಿಂದ ಮಲ್ಪೆಗೆ ತೆರಳುತ್ತಿದ್ದ ಟೆಂಪೋ ಬಿಕ್ಕೊ ಕಂಪನಿಯ ಮುಂಭಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಅಲ್ಲಿಂದ ಸರ್ವಿಸ್ ರಸ್ತೆಗೆ ಮುಗುಚಿ ಬಿದ್ದಿದೆ. ಇದರ ಪರಿಣಾಮ ಟೆಂಪೋದಲ್ಲಿದ್ದ ಎಲ್ಲರೂ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದಾರೆ.
ಗಾಯಾಳುಗಳ ಪೈಕಿ ಇಬ್ಬರು ಘಟನಾ ಸ್ಥಳದಲ್ಲಿಯೇ ಉಳಿದ ಮೂವರು ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಆಗದೆ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಶ್ಚಿಮ ಬಂಗಾಳ ಮಿಡ್ನಾಪುರದ ಕಮಲ್ ಮತ್ತು ಸಮರೇಶ್, ಅಸ್ಸಾಂ ಕಛ್ಹರದ ಪಪ್ಪು ರವಿದಾಸ್ (28) ಮತ್ತು ಹರೀಶ್ (27), ತ್ರಿಪುರಾ ಅಗರ್ತಲದ ಗಪೂನಾಥ್ (50) ವರ್ಷ ಎಂದು ತಿಳಿದು ಬಂದಿದೆ.
ಕೋತಲ್ ಕಟ್ಟೆ ನಿವಾಸಿ ಚಾಲಕ ರಂಜಿತ್ ಪೂಜಾರಿ ಹಾಗೂ ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ಉಳಿದ ಇಬ್ಬರು ಸಣ್ಣ ಪುಟ್ಟ ಗಾಯಗೊಂಡು ಚಿಕಿತ್ಸೆಯಲ್ಲಿದ್ದಾರೆ.
ಉಡುಪಿ ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರು ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಆಸ್ಪತ್ರೆ ಸಾಗಿಸುವಲ್ಲಿ ಸಹಕಾರಿಸಿದ್ದಾರೆ.
ಆಸ್ಪತ್ರೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ ಗಾಯಾಳುಗಳ ಸಂಬಂಧಿಕರಿಗೆ ಸಾಂತ್ವನ ಹೇಳಿದ್ದಾರೆ.
ಕಾಪು ವೃತ್ತ ನಿರೀಕ್ಷಕ ಅಜ್ಜತ್ ಅಲಿ, ಕಾಪು ಎಸೈ ತೇಜಸ್ವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

