ಮಜೂರು: ಫೆ.1ರಂದು ‘ನೋಡಬನ್ನಿ ನಮ್ಮ ಮಸೀದಿ’ ಕಾರ್ಯಕ್ರಮ
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಸೀದಿ ಅಧ್ಯಕ್ಷ ಡಾ. ಎಂ. ಫಾರೂಕ್ ಉಮರಬ್ಬ ಚಂದ್ರನಗರ
(Kaup) ಕಾಪು: ಮಲ್ಲಾರು-ಮಜೂರಿನ ಬದ್ರಿಯಾ ಜುಮಾ ಮಸ್ಜಿದ್ ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ನೋಡ ಬನ್ನಿ ನಮ್ಮ ಮಸೀದಿ ಎಂಬ ವಿನೂತನ ಕಾರ್ಯಕ್ರಮವನ್ನು ಫೆಬ್ರವರಿ 1ರಂದು ಆಯೋಜಿಸಿದೆ.
ಕಾಪು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಸೀದಿ ಅಧ್ಯಕ್ಷ ಡಾ. ಎಂ. ಫಾರೂಕ್ ಉಮರಬ್ಬ ಚಂದ್ರನಗರ, ಹಲವು ವರ್ಷಗಳ ಇತಿಹಾಸವಿರುವ ಪುರಾತನ ಮಸೀದಿಗಳಲ್ಲಿ ಒಂದಾದ ಈ ಮಸೀದಿಯನ್ನು ಗುಡ್ಡೆ ಮಸೀದಿ, ಇಲ್ಯಾಸ್ ನಬಿ ಮಸೀದಿ ಎಂದು ಗುರುತಿಸಲ್ಪಡುತ್ತಿತ್ತು. ಮಸೀದಿ ಪುನರ್‌ನಿರ್ಮಾಣಗೊಂಡ ಬಳಿಕ ಬದ್ರಿಯಾ ಜುಮಾ ಮಸೀದಿಯಾಗಿ ಹೆಸರನ್ನು ಬದಲಾಯಿಸಲಾಯಿತು.
ಇದೀಗ ಆಕರ್ಷಣೀಯವಾಗಿ ನವೀಕೃತಗೊಂಡ ಮಸೀದಿ, ಅಪೂರ್ವ ಕೆತ್ತನೆಯ ಮಸೀದಿಯ ಪ್ರವೇಶ ದ್ವಾರ, ವಿಶಾಲವಾದ ಸೋಲಾರ್ ಅಳವಡಿಕೆ, ಮಸೀದಿ ಅಂಗಳ ಪ್ರವೇಶದ ಮುಖ್ಯದ್ವಾರ, ಬಹುನಿರೀಕ್ಷಿತ ತಡೆಗೋಡೆ, ಮಸೀದಿ ಪರಿಸರ ಸೇರಿದಂತೆ ಹತ್ತಾರು ಕಾಮಗಾರಿಗಳ ವೀಕ್ಷಣೆ, ವಿಶಾಲವಾದ ಅಡುಗೆ ಕೋಣೆ ನಿರ್ಮಾಣ, ಶಾಶ್ವತ ಲೋಕದ ಪ್ರಥಮ ಮನೆ ದಫನ ಭೂಮಿಯ ಅಂದಗೊಳಿಸುವಿಕೆ ಮುಂತಾದ ಹತ್ತಾರು ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ.
ಬೆಳಗ್ಗೆ 10:30ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ1ರಿಂದ ಸಂಜೆ 7ರವರೆಗೆ ಸರ್ವಧರ್ಮೀಯರ ಮಸೀದಿ ಸಂದರ್ಶನ ʼನೋಡ ಬನ್ನಿ ನಮ್ಮ ಮಸೀದಿʼ ಕಾರ್ಯಕ್ರಮ ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸೈಯದ್ ಕೆ.ಎಸ್. ಆಟಕೋಯ ತಂಬಳ್ ಕುಂಬೋಳ್, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝನುಲ್ ಉಲಮಾ ಮಾಣಿ ಉಸ್ತಾದ್, ಸಹಾಯಕ ಖಾಝಿ ಬಿ.ಕೆ. ಅಬ್ದುರ್ರಹ್ಮಾನ್ ಮದನಿ ಮೂಳೂರು, ಕಾಪು ಖಾಝಿ ಪಿ.ಬಿ. ಅಹ್ಮದ್ ಮುಸ್ಲಿಯಾರ್, ನೌಫಲ್ ಸಖಾಫಿ ಕಳಸ ಹಾಗೂ ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಸೀದಿಯ ಖತೀಬ್ ಎಂ.ಕೆ. ಅಬ್ದುರಶೀದ್ ಸಖಾಫಿ, ಕಾರ್ಯದರ್ಶಿ ಅಶ್ರಫ್ ಕರಂದಾಡಿ, ಜತೆ ಕಾರ್ಯದರ್ಶಿ ರಜಬ್ ಕರಂದಾಡಿ, ರಝಾಕ್ ಕೊಪ್ಪಲ ತೋಟ, ರಝಾಕ್ ಕೊಪ್ಪ ಉಪಸ್ಥಿತರಿದ್ದರು.

