ಕುಂದಾಪುರ ಚರ್ಚ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿಕ್ಕಿ ವ್ಯಕ್ತಿಯ ಬರ್ಬರ ಹತ್ಯೆ
ಹೆಬ್ರಿ ಗಿಲ್ಲಾಳಿ ನಿವಾಸಿ ಐವನ್ ರಿಚರ್ಡ್ (ಮುನ್ನ) ಹತ್ಯೆಗೀಡಾದ ವ್ಯಕ್ತಿ.
(Kundapura) ಕುಂದಾಪುರ : ಶುಕ್ರವಾರ ಮುಂಜಾನೆ ಕುಂದಾಪುರದಲ್ಲಿ ದುಷ್ಕರ್ಮಿಗಳು ವ್ಯಕಿಯೊಬ್ಬನನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆಗೈದ ಆತಂಕಕಾರಿ ಘಟನೆ ನಡೆದಿದೆ.
ಕುಂದಾಪುರದ ಚರ್ಚ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಉಡುಪಿ ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಹತ್ಯೆಗೀಡಾದ ವ್ಯಕ್ತಿ.
ಈತ ಹೆಬ್ರಿ ಗಿಲ್ಲಾಳಿಯಲ್ಲಿ ಜಾಗ ಖರೀದಿ ಮಾಡಿ ಮನೆ ಮಾಡಿಕೊಂಡು ಮಾಡಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದನು. ಮುಂಜಾನೆ 3:30 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಲವು ವ್ಯವಹಾರಗಳನ್ನು ನಡೆಸುತ್ತಿದ್ದ ಐವನ್ (ಮುನ್ನ) ಇಂದು ಮುಂಜಾನೆ ಮಹಿಳೆಯೊಂದಿಗೆ ಕಾರಿನಲ್ಲಿ ಕುಂದಾಪುರದ ಚರ್ಚ್ ರಸ್ತೆಗೆ ಬಂದಿದ್ದ ವೇಳೆ, ಹೋಲಿ ರೋಸರಿ ಚರ್ಚ್ ಎದುರು ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲ್ನಿಂದ ಐವನ್ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಗುಂಡೇಟಿನಿಂದ ತೀವ್ರ ರಕ್ತಸ್ರಾವಗೊಂಡ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಜೊತೆಯಲ್ಲಿದ್ದ ಮಹಿಳೆ ಆರೋಪಿಯನ್ನು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಇನ್ನಷ್ಟೇ ಕಾರಣ ತಿಳಿದು ಬರಬೇಕಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸರು ಹಾಗೂ ಸೊಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಕುರಿತು ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

