ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ
ಪುಸ್ತಕ ಪ್ರದರ್ಶನ ಉದ್ಘಾಟಿಸಿದ ಪ್ರಾಂಶುಪಾಲ ನಾಗರಾಜ್ ಜಿ. ಎಸ್.
(Udupi) ಉಡುಪಿ: ಸರಕಾರಿ ಪದವಿಪೂರ್ವ ಕಾಲೇಜು ಉಡುಪಿಯಲ್ಲಿ ವಾಚನಾಲಯ ಸಂಘದ ವತಿಯಿಂದ ರಾಷ್ಟ್ರೀಯ ಗ್ರಂಥಪಾಲಕರ ದಿನದ ಅಂಗವಾಗಿ ಪುಸ್ತಕ ಪ್ರದರ್ಶನ ಮತ್ತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಾಲೇಜಿನ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನವನ್ನು ಕಾಲೇಜು ಪ್ರಾಂಶುಪಾಲ ನಾಗರಾಜ್ ಜಿ.ಎಸ್. ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಆಧುನಿಕ ವಾಚನಾಲಯದ ಪಿತಾಮಹ ಡಾ. ಎಸ್ ಆರ್ ರಂಗನಾಥ್ ಅವರ ಜನ್ಮದಿನಾಚರಣೆ ಪ್ರಯುಕ್ತ ಪುಸ್ತಕ ಹೊಸ ಜಗತ್ತನ್ನೇ ಸೃಷ್ಟಿಸುತ್ತದೆ. ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜೊತೆಗೆ ಜ್ಞಾನವನ್ನು ವಿಸ್ತರಿಸುವ ವಿವಿಧ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳು ವ್ಯಕ್ತಿತ್ವ ವಿಕಸನ, ಚಿಂತನಾ ಶಕ್ತಿ ಹಾಗೂ ಜ್ಞಾನಾರ್ಜನೆಗೆ ಪ್ರಮುಖ ಸಾಧನಗಳಾಗಿವೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಓದುವ ಹವ್ಯಾಸವನ್ನು ಸ್ಮರಿಸಿದ ಅವರು, ಪುಸ್ತಕ ಓದುವ ಮೂಲಕ ಅಗಾಧ ಜ್ಞಾನವನ್ನು ಸಂಪಾದಿಸಬಹುದು. ವಿದ್ಯಾರ್ಥಿಗಳು ನಿರಂತರ ಓದುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಹಿರಿಯ ಉಪನ್ಯಾಸಕ ಕೃಷ್ಣಾನಂದ ಕೆ. ಹಾಗೂಇತಿಹಾಸ ಉಪನ್ಯಾಸಕಿ ಶ್ರೀಮತಿ ಗ್ರೇಸಿ ಕೆ.ಜೆ ಅವರು ಶುಭ ಹಾರೈಸಿದರು.
ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಹಾಗೂ ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಗ್ರಂಥಪಾಲಕಿ ಮಂಜುಳಾ ಅವರ ನೇತೃತ್ವದಲ್ಲಿ ಪುಸ್ತಕ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಉಪನ್ಯಾಸಕಿಯರು, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಭಾಗಿರತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನ ಗ್ರಂಥಪಾಲಕಿ ಮಂಜುಳಾ ನಿರೂಪಿಸಿ, ವಂದಿಸಿದರು.

