ಕಟಪಾಡಿ: ಕೃಷ್ಣ ಜನ್ಮಾಷ್ಟಮಿ ಆಚರಣೆ
ಎಸ್ ವಿ ಎಸ್ ವಿದ್ಯಾ ದೇಗುಲದಲ್ಲಿ ವಿಜೃಂಭಿಸಿದ ನೂರಾರು ರಾಧಾ ಕೃಷ್ಣ ಬಾಲಲೀಲೆ
(Katapadi) ಕಟಪಾಡಿ: ಕಟಪಾಡಿ ಎಸ್ವಿಎಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಲಾಗಿದ್ದ ‘ರಾಧಾ ಕೃಷ್ಣ ಲೀಲೋತ್ಸವ’ ಕಾರ್ಯಕ್ರಮವು ಅತ್ಯಂತ ವಿಜೃಂಭಣೆ ಹಾಗೂ ಹಬ್ಬದ ಸಡಗರದಿಂದ ನೆರವೇರಿತು.
ಶಾಲಾ ಆಡಳಿತ ಮಂಡಳಿಯು ಎಲ್ಕೆಜಿಯಿಂದ 6 ನೇ ತರಗತಿಯ ನೂರಾರು ವಿದ್ಯಾರ್ಥಿಗಳಿಗೆ ಕೃಷ್ಣ ಹಾಗೂ ರಾಧೆಯ ವೇಷ ಧರಿಸಲು ಅವಕಾಶ ಕಲ್ಪಿಸಿತ್ತು. ಶಾಲೆಯ ಆವರಣದಲ್ಲಿ ನೂರಾರು ಪುಟ್ಟ ಪುಟ್ಟ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರ ವೇಷದಲ್ಲಿ ಮಿಂಚಿ, ತಮ್ಮದೇ ಆದ ಬಾಲಲೀಲೆಗಳ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಿದರು.
ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಇಂತಹ ವೇದಿಕೆ ಅಗತ್ಯ: ಸತ್ಯೇಂದ್ರ ಪೈ
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಲಾ ಸಂಚಾಲಕರಾದ ಸತ್ಯೇಂದ್ರ ಪೈ, ವಿದ್ಯಾರ್ಥಿಗಳ ಬಾಲ್ಯದ ಜೀವನವೇ ಒಂದು ಸುಂದರ ಲೀಲೋತ್ಸವ. ನೂರಾರು ಪುಟ್ಟ ಕೃಷ್ಣಂದಿರು ತಮ್ಮ ಮುದ್ದಾದ ಲೀಲೆಗಳ ಮೂಲಕ ನಮಗೆ, ಹೆತ್ತವರಿಗೆ ಹಾಗೂ ಇಡೀ ಕಟಪಾಡಿ ಊರಿಗೆ ಹಬ್ಬದ ಸಂಭ್ರಮವನ್ನು ತಂದುಕೊಟ್ಟಿದ್ದಾರೆ. ಮಕ್ಕಳಿಗೆ ಸೂಕ್ತ ಅವಕಾಶಗಳನ್ನು ಒದಗಿಸಿದಾಗ ಮಾತ್ರ ಅವರಲ್ಲಿ ಬೆಳೆಯುವ ಆಕಾಂಕ್ಷೆ ಮತ್ತು ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಶಿಕ್ಷಕರು ಮತ್ತು ಪೋಷಕರ ಶ್ರಮ ಹಾಗೂ ಸಹಕಾರದಿಂದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ,” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾ ಡಿಸೋಜ, ಆಡಳಿತ ಮಂಡಳಿಯ ಸದಸ್ಯರಾದ ಬಿ. ಸಿ. ಪೈ, ಗಣೇಶ್ ಕಿಣಿ ಹಾಗೂ ಎಸ್ವಿಎಸ್ ಎಇಒ ಸುಧಾಕರ್ ಬ್ರಹ್ಮಾವರ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪೋಷಕರು ಹಾಗೂ ಊರಿನ ಪ್ರಮುಖರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ, ಮಕ್ಕಳ ಬಾಲಲೀಲೆಯನ್ನು ಕಣ್ಣುಂಬಿಕೊಂಡು ಸಂಭ್ರಮಿಸಿದರು.

