ಅಥಣಿಯ ಜಿ-ಮಾರ್ಟ್ ಎದುರು ಅರ್ಧಕ್ಕೇ ನಿಂತ ಶೌಚಾಲಯ ಸ್ಥಳೀಯರ ಆಕ್ರೋಶ
ಅಧಿಕಾರಿಗಳ ಅಸಡ್ಡೆ, ಜನಪ್ರತಿನಿಧಿಗಳ ಉದಾಸೀನತೆಗೆ ಕೈಗನ್ನಡಿಯಾದ ಶೌಚಾಲಯ
(Athani) ಅಥಣಿ: ಅಧಿಕಾರಿಗಳ ಅಸಡ್ಡೆ, ಜನಪ್ರತಿನಿಧಿಗಳ ಉದಾಸೀನತೆಗೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಿವಣಿಗಿ ಕಾಂಪ್ಲೆಕ್ಸ್ ಹಿಂಭಾಗದ ಸಾರ್ವಜನಿಕ ಶೌಚಾಲಯವೇ ಜೀವಂತ ಸಾಕ್ಷಿಯಾಗಿದೆ.
ಜಿ-ಮಾರ್ಟ್ ಎದುರಿಗೆ ಆರಂಭವಾದ ಈ ಶೌಚಾಲಯ ಕಾಮಗಾರಿ ಅರ್ಧಕ್ಕೇ ನಿಂತು ತಿಂಗಳುಗಳೇ ಉರುಳಿದರೂ, ಅದನ್ನು ಪೂರ್ಣಗೊಳಿಸುವ ಮನಸ್ಸು ಮಾತ್ರ ಸಂಬಂಧಪಟ್ಟ ಅಧಿಕಾರಿಗಳಿಗೆ ಬಂದಿಲ್ಲ.
ಪಟ್ಟಣದ ಹೃದಯಭಾಗದಲ್ಲೇ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಅತ್ಯಗತ್ಯವಾಗಿ ಬೇಕಿರುವ ಶೌಚಾಲಯ ಕಾಮಗಾರಿಯನ್ನು ಮಧ್ಯದಲ್ಲೇ ಸ್ಥಗಿತಗೊಳಿಸಿರುವುದು ಆಡಳಿತ ಯಂತ್ರದ ಕಣ್ಣುಮುಚ್ಚಾಲೆ ಆಟಕ್ಕೆ ಹಿಡಿದ ಕನ್ನಡಿಯಾಗಿದೆ.
ಅಥಣಿ ಪುರಸಭೆ, ತಾಲೂಕು ಆಡಳಿತ, ತಹಶೀಲ್ದಾರ್, ಮಾನ್ಯ ಶಾಸಕರು, ಚಿಕ್ಕೋಡಿ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಇನ್ನೇನು ಶೌಚಾಲಯ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕರ ಸೇವೆಗೆ ಮುಕ್ತವಾಗಬೇಕಿದ್ದ ಹಂತದಲ್ಲಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.?
ಜನಸಾಮಾನ್ಯರ ಹಿತದೃಷ್ಟಿಯಿಂದ ನಿರ್ಮಾಣವಾಗುತ್ತಿದ್ದ ಕಾಮಗಾರಿಯನ್ನು ಅರ್ಧಕ್ಕೇ ತಡೆದು ನಿಲ್ಲಿಸಿದ ಹಿಂದಿನ ದುರುದ್ದೇಶವೇನು ಎಂಬುದನ್ನು ಅಥಣಿ ಪುರಸಭೆ ಆಡಳಿತ ತಕ್ಷಣ ಬಹಿರಂಗಪಡಿಸಬೇಕಿದೆ.
ಮಹಿಳೆಯರ ನರಕಯಾತನೆ: ದಿನನಿತ್ಯ ಮಾರುಕಟ್ಟೆಗೆ ಬರುವ ನೂರಾರು ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಸ್ಥಳೀಯ ಮಹಿಳಾ ವ್ಯಾಪಾರಿಗಳು ಶೌಚಾಲಯವಿಲ್ಲದೆ ಅನುಭವಿಸುತ್ತಿರುವ ಯಾತನೆ ಮಾತಿನಲ್ಲಿ ಹೇಳತೀರದು.
ಇನ್ನಾದರೂ ಪುರಸಭೆ, ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು, ಅಥಣಿಯಲ್ಲಿ ಸಾರ್ವಜನಿಕರ ಶೌಚಾಲಯಕ್ಕೆ ಮತ್ತು ಮಹಿಳೆಯರ ಶೌಚಾಲಯ ನಿರ್ಮಾಣ ಮಾಡುವ ಸಮಸ್ಯೆ ಬಗೆಹರಿಸುತ್ತಾರೆಯೇ ಅಥವಾ ಯಥಾ ಸ್ಥಿತಿ ಮುಂದುವರಿಸ್ತಾರ ಎಂದು ಕಾದು ನೋಡಬೇಕಿದೆ.
ವರದಿ ಮಹೇಶ ಶರ್ಮಾ

