ಉಡುಪಿ ಮಂಗಳೂರಿನ ದೇವಸ್ಥಾನಗಳಲ್ಲಿ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿಯವರಿಂದ ವಿಶೇಷ ಪೂಜೆ.
ಕುಕ್ಕೆ ಶ್ರೀ ಸುಬ್ರಮಣ್ಯ ದೇಗುಲ, ಕೊಲ್ಲೂರು ಮೂಕಾಂಬಿಕೆ, ಉಡುಪಿ ಶ್ರೀಕೃಷ್ಣಮಠ, ಪಾವಂಜೆ ದೇಗುಲ ದರ್ಶನ ಪಡೆದ ರವಿ ಶಾಸ್ತ್ರಿ
(Udupi) ಉಡುಪಿ: ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪ್ರಸಿದ್ಧ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿಯವರು ತಮ್ಮ ಧಾರ್ಮಿಕ ಪ್ರವಾಸದ ನಿಮಿತ್ತ ತವರಿಗೆ ಆಗಮಿಸಿ ಉಡುಪಿ ಮಂಗಳೂರಿನ ಅನೇಕ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕುಕ್ಕೆ ಕ್ಷೇತ್ರದಲ್ಲಿ ಶ್ರೀ ಸುಬ್ರಮಣ್ಯದೇವರ ದರ್ಶನ ಹಾಗೂ ಸಂಪುಟ ಶ್ರೀನರಸಿಂಹ ಸ್ವಾಮಿಯ ದರ್ಶನ ಸ್ವೀಕರಿಸಿ ಶ್ರೀಸುಬ್ರಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರಿಂದ ಆಶೀರ್ವಾದ ಪಡೆದು ಕೊಲ್ಲೂರಿನ ಮೂಕಾಂಬಿಕೆಯ ದರ್ಶನ ಪೂರೈಸಿದರು.
ಉಡುಪಿಯಲ್ಲಿ ಶ್ರೀಕೃಷ್ಣಮುಖ್ಯ ಪ್ರಾಣದೇವರ ದರ್ಶನ ಪಡೆದ ನಂತರ ಪರ್ಯಾಯ ಶ್ರೀ ಶಿರೂರು ಮಠದ ಶ್ರೀವೇದವರ್ಧನತೀರ್ಥ ಶ್ರೀಪಾದರು ಶಾಸ್ತ್ರಿಯವರಿಗೆ ಫಲ ಮಂತ್ರಾಕ್ಷತೆ ಸಹಿತವಾಗಿ ಮಧ್ವಪೀಠದಲ್ಲಿ ವಿಶೇಷ ಅಭಿನಂದನೆ ನೆರವೇರಿಸಿದರು.
ಪಾವಂಜೆ ಶ್ರೀಸುಬ್ರಮಣ್ಯ ದೇವರ ದರ್ಶನ ಪೂರೈಸಿ ಕರ್ವಾಲಿನಲ್ಲಿರುವ ಶ್ರೀವಿಷ್ಣುಮೂರ್ತಿ ದೇವರಿಗೆ ಮತ್ತು ಕುಟುಂಬದ ಮೂಲ ನಾಗದೇವರ ಸನ್ನಿಧಾನಕ್ಕೆ ಪಂಚಾಮೃತ ಸಹಿತ ವಿಶೇಷ ಪೂಜೆ ಸಲ್ಲಿಸಿದರು. ಕರ್ವಾಲು ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ರವಿಶಾಸ್ತ್ರಿಯವರಿಗೆ ವಿಶೇಷ ಅಭಿನಂದನೆ ನೆರವೇರಿತು.
ಈ ಶುಭ ಸಂದರ್ಭದಲ್ಲಿ ರವಿಶಾಸ್ತ್ರಿಯವರ ಕುಟುಂಬಿಕರಾದ ಸಂತೋಷ ಶಾಸ್ತ್ರಿ, ಶ್ರೀಮತಿ ಕವಿತಾ ಶಾಸ್ತ್ರಿ ಆಪ್ತರಾದ ವಾದಿರಾಜ ಪೆಜತ್ತಾಯ, ಲಾತವ್ಯ ಆಚಾರ್ಯ, ಅಶ್ವಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

