ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಸುವ ಮೋಗವೀರರು ಮೀನುಗಾರಿಕೆಗಾಗಿ ಬಳಸುವ ಬಲೆಗಳನ್ನು ಜೋಡಿಸುವ ಕಾರ್ಯ “ದಾರ” ಭಾನುವಾರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.

ವರ್ಷಂಪ್ರತಿಯಂತೆ ಉಡುಪಿ ಜಿಲ್ಲೆಯ ಉಚ್ಚಿಲ ಕೇಂದ್ರವಾಗಿಟ್ಟುಕೊಂಡು ಉಚ್ಚಿಲ- ಎರ್ಮಾಳು ವಲಯದ ನಾಡದೋಣಿ ಮೀನುಗಾರರು ಸಾಂಪ್ರ್ರದಾಯಿಕ ನಾಡದೋಣಿ ಮೀನುಗಾರಿಕೆಗಾಗಿ “ದಾರ” ಮುಹೂರ್ತ ನಡೆಸಿದ್ದಾರೆ.
ಕಳೆದ ವರ್ಷ ಆಗಸ್ಟ್ ೧೫ ರಂದು ನಾಡದೋಣಿ ಮೀನುಗಾರಿಕೆ ಋತು ಕೊನೆಗೊಂಡ ಬಳಿಕ ಮೀನುಗಾರಿಕೆಗೆ ಬಳಸಿದ ಮಾಟುಬಲೆಯನ್ನು ಬಿಡಿಬಿಡಿಯಾಗಿಸಿ ಸಂಗ್ರಹಿಸಿಡುತ್ತಾರೆ. ಹರಿದ ಬಲೆಗಳನ್ನು ಸರಿಪಡಿಸುವ ಉದ್ದೇಶದಿಂದ ಮೀನುಗಾರ ಪ್ರತಿನಿಧಿಗಳಿಗೆ ಹಂಚುತ್ತಾರೆ. ಅವರೆಲ್ಲರೂ ಅದನ್ನು ಡಿಸೆಂಬರ್ ೧೫ ರೊಳಗೆ ಫಂಡಿನ ಮುಖ್ಯಸ್ಥರಿಗೆ ತಲುಪಿಸಬೇಕು. ಆಯಕಟ್ಟಿನ ಜಾಗದಲ್ಲಿ ಬಿಡಿಬಿಡಿಯಾಗಿ ಜೋಡಿಸಿಟ್ಟ ಬಲೆಗಳನ್ನು ಮಳೆಗಾಲ ಆರಂಭಗೊಂಡ ಬಳಿಕ ಸಾಮೂಹಿಕವಾಗಿ ನಿಗದಿ ಪಡಿಸಿದ ದಿನದಂದು ಎಲ್ಲರೂ ಒಗ್ಗಾಟ್ಟಾಗಿ ಪೋಣಿಸುವ ಕೆಲಸವೇ ದಾರ.
ಎಲ್ಲಾ ಫಂಡಿನಿಂದ ತಲಾ ೫ ಮಂದಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದಲ್ಲಿ ಪುರೋಹಿತರ ಬಳಿ ದಾರ ಪ್ರಕ್ರಿಯೆಗಾಗಿ ಶುಭಮೂಹೂರ್ತ ಯಾಚಿಸುತ್ತಾರೆ. ಪುರೋಹಿತರು ನೀಡಿದ ಶುಭ ಮುಹೂರ್ತದಂದು ಪ್ರತಿಯೊಂದು ಫಂಡಿನವರು ಒಗ್ಗಟ್ಟಾಗಿ ದೈವ ದೇವರುಗಳಿಗೆ ಪ್ರಾರ್ಥಿಸಿ ಬಲೆಗಳನ್ನು ಜೋಡಿಸುವ ಮೂಲಕ ದಾರ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ.

ದಾರ ಮುಗಿದ ಬಳಿಕ ಜೋಡಿಸಿದ ಬಲೆಗಳನ್ನು ದೋಣಿಗಳಲ್ಲಿ ತುಂಬಿಸಿ ಮತ್ತೊಂದು ಶುಭ ಮುಹೂರ್ತದಲ್ಲಿ ಬಲೆಯನ್ನು ನೀರಿಗೆ ಹಾಕುವ ಸಂಪ್ರಾದಾಯವಿದೆ.
ಮಳೆಗಾಲದ ಅವಧಿಯಲ್ಲಿ ಇರುವ ಅಲ್ಪ ಪರಿಮಿತಿಯೊಳಗೆ ಮೀನುಗಾರಿಕೆ ನಡೆಸಬೇಕು. ಈ ಅವಧಿಯಲ್ಲಿ ಬೆಳೆಬಾಳುವ ಸಿಗಡಿ ದೊರೆತರೆ ಮಾತ್ರ ಬಂಪರ್ ಲಾಟರಿ ಸಿಕ್ಕಿದಂತೆ. ಉಳಿದಂತೆ ದೊರಕುವ ಬಂಗುಡೆ, ಬೂತಾಯಿ, ಇನ್ನಿತರ ಸಣ್ಣಪುಟ್ಟ ಮೀನುಗಳು ಹೇರಳ ದೊರಕಿದರೂ ಪ್ರಯೋಜನವಿಲ್ಲ. ಕೇವಲ ಸಿಗಡಿ ಬೇಟೆಗಾಗಿ ಮೀನುಗಾರರು ಆಶಾ ಭಾವದೊಂದಿಗೆ ಕಡಲಗಿಳಿಯುತ್ತಾರೆ.
ಉಚ್ಚಿಲ ಸುಭಾಷ್ ಕೈ ರಂಪಣಿ ಪಂಡಿನ ಮೀನುಗಾರರಲ್ಲೋರ್ವರು ಮಾತನಾಡಿ, ಬೆಲೆ ಏರಿಕೆ, ಬಂದರು ಸೌಲಭ್ಯ ಇಲ್ಲದಿರುವುದು, ಬೃಹತ್ ಕೈಗಾರಿಕೆಗಳಿಂದ ಕಲುಷಿತ ನೀರು ಸಮುದ್ರಕ್ಕೆ ಬಿಡುತ್ತಿರುವುದು ಹಾಗೂ ಮೀನು ಸಂತತಿ ನಾಶವಾಗಿರುವುದು, ನಾಡದೋಣಿ ಮೀನುಗಾರಿಕೆಗೆ ಇತ್ತೀಚಿನ ವರ್ಷಗಳಲ್ಲಿ ಭಾರೀ ನಷ್ಟವನ್ನುಂಟು ಮಾಡುತ್ತಿವೆ. ಬೃಹತ್ ಉದ್ದಿಮೆಗಳಿಂದ ತೀರ ಮೀನುಗಾರಿಕೆಗೆ ತೀರಾ ಸಮಸ್ಯೆ ಉಂಟಾಗಿದ್ದು ಮೊಟ್ಟೆ ಇಡಲು ಬರುತ್ತಿರುವ ಮೀನುಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಇಲ್ಲಿ ಮೀನುಗಾರಿಗೆ ಯೋಗ್ಯ ಸ್ಥಳ ಇಲ್ಲವಾದ್ದರಿಂದ ಪ್ರತಿದಿನ ಟೆಂಪೋ ಮೂಲಕ ಮಲ್ಪೆ ಅಥವಾ ಮಂಗಳೂರು ಬಂದರಿಗೆ ಹೋಗಿ ಮೀನುಗಾರಿಕೆ ನಡೆಸಬೇಕಾಗಿದೆ. ಹಾಗಾಗಿ ದಿನ ನಿತ್ಯ ಫಂಡ್ ಒಂದಕ್ಕೆ ಸಾವಿರಾರು ರುಪಾಯಿ ಖರ್ಚು ಸಂಭವಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೆಲೆಯೇರಿಕೆಯಿಂದ ಖರ್ಚು ವೆಚ್ಚ ಜಾಸ್ತಿಯಾಗುತ್ತಿದ್ದು ಸಾಕಷ್ಟು ಸಂಪಾದನೆ ಆಗುತ್ತಿಲ್ಲ. ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಉಳಿಯ ಬೇಕಾದರೆ, ಜತೆಗೆ ಬಡ ಮೀನುಗಾರರು ಬದುಕು ಹಸನಾಗಬೇಕಾದರೆ, ಸರಕಾರ ನಮ್ಮ ಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸ ಬೇಕು.
ಬೆಳಿಗ್ಗಿನ ಜಾವ ೪ಗಂಟೆಗೆ ನಾವು ಮೀನುಗಾರಿಗೆಗೆ ತೆರಳಬೇಕಿದೆ. ಆ ಸಮಯ ಬಸ್ಸು ಕೂಡಾ ಇಲ್ಲ. ಆದ್ದರಿಂದ ಟೆಂಪೋವನ್ನು ಅವಲಂಬಿಸಿಬೇಕಿದೆ. ಈ ಬಾರಿ ಮಳೆ ತಡವಾದುದರಿಂದ ಕಡಲು ಪ್ರಕ್ಷುಬ್ಧಗೊಂಡಿಲ್ಲ. ಮಳೆ ಬಂದು ಕಡಲು ದೊಡ್ಡದಾಗುವಾಗ ಬೋಟ್ನವರು ಮೀನುಗಾರಿಕೆ ಪ್ರಾರಂಭಿಸುತ್ತಾರೆ ಎಂದು ಹೇಳಿದ್ದಾರೆ

