ರಸ್ತೆ ಅಪಘಾತಕ್ಕೆ ರಂಗಭೂಮಿ ಕಲಾವಿದ ಬಲಿ
(Bantwala) ಬಂಟ್ವಾಳ: ರಸ್ತೆ ಅಪಘಾತಕ್ಕೆ ರಂಗ ಭೂಮಿ ಕಲಾವಿರೋರ್ವರು ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.
ಬಂಟ್ವಾಳ ತಾಲೂಕಿನ ದೇವಶ್ಯಪಡೂರು ಗ್ರಾಮದ ಮರಾಯಿದೊಟ್ಟು, ನೂಜೆ ದಿ. ಬೇಬಿ ಅವರ ಪುತ್ರ ಗೌತಮ್ (26) ಮೃತಪಟ್ವರಾಗಿದ್ದಾರೆ.
ಮೂಡುಬಿದಿರೆ ಪಿಂಗಾರ ಕಲಾವಿದೆರ್ ತಂಡದ ಕಲಾವಿದರಾಗಿದ್ದ ಅವರು ಶನಿವಾರ ಬೆಳುವಾಯಿಯಲ್ಲಿ ನಾಟಕ ಮುಗಿಸಿ ಮುಂಜಾನೆ ಸುಮಾರು 3 ಗಂಟೆಯ ಹೊತ್ತಿಗೆ ಮನೆಗೆ ವಾಪಾಸಾಗುತ್ತಿದ್ದಾಗ ಮನೆಯ ಸಮೀಪ ಮರವೊಂದಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ ರಸ್ತೆಗೆ ಬಿದ್ದು ಗೌತಮ್ ಅವರ ತಲೆಗೆ ಗಂಭೀರ ಗಾಯಗೊಂಡಿದ್ದರು.
ಆದರೆ ಅಪಘಾತದ ಬೆಳಿಗ್ಗೆಯವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ.ಬೆಳಗ್ಗೆ ರಸ್ತೆಯಲ್ಲಿ ಬಿದ್ದಿದ್ದ ಗೌತಮನ್ನು ಸ್ಥಳೀಯರು ಗಮನಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡರು.
ಈ ಬಗ್ಗೆ ಬಂಟ್ವಾಳ
ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.
ಅವಿವಾಹಿತರಾಗಿದ್ದ ಅವರು ಬಿ.ಸಿ. ರೋಡ್ ನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು.
ಮೃತರು ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.

