ಪಡುಬಿದ್ರಿಯಲ್ಲಿ ಅದಾನಿ – ಯುಪಿಸಿಎಲ್ ಕಂಪನಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಆದಾನಿ ಸಿಎಸ್‌ಆರ್ ನಿಧಿಯಿಂದ ಶೇ.16 ರಷ್ಟು ಶಿಕ್ಷಣ ಕ್ಷೇತ್ರಕ್ಕೆ : ಕಿಶೋರ್ ಆಳ್ವ
ಪಡುಬಿದ್ರಿ: ಅದಾನಿ ಯುಪಿಸಿಎಲ್‌ನ ಸಿಎಸ್‌ಆರ್ ಅನುದಾನದಲ್ಲಿ ಶೇ.16ರಷ್ಟು ಶಿಕ್ಷಣ ಕ್ಷೇತ್ರಕ್ಕೆ ವ್ಯಯಿಸಲಾಗುತ್ತಿದೆ. ಯುಪಿಸಿಎಲ್ ಸ್ಥಾವರದ ಸುತ್ತಮುತ್ತಲಿನ 12 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೆಲೆಸಿರುವ 773 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟುರೂ. 20 ಲಕ್ಷಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಿದ್ದೇವೆ ಎಂದು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ (Adhani, UPCL President Kishore Alva) ಹೇಳಿದರು.
ಅವರು ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆಯು ಅದಾನಿ ಫೌಂಡೇಶನ್‌ನ ಸಿಎಸ್‌ಆರ್ ಯೋಜನೆಯ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಡುಬಿದ್ರಿಯ ಬಂಟರ ಭವನದಲ್ಲಿ ನಡೆದ ವಿದ್ಯಾರ್ಥಿ ವೇತನ ಸಮಾರಂಭದಲ್ಲಿ ಮಾತನಾಡಿದರು.
2022-23ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸ್ಥಾವರದ ನೆರೆ ಪಂಚಾಯತ್‌ಗಳ ಮುಖೇನ ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿ ವೇತನದಿಂದ ಓದುವ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹಿಸುವುದರ ಜೊತೆಗೆ ಇತರ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪ್ರಕ್ರಿಯೆಯ ಚಿಂತನೆ ಮಾಡಲು ಅನುವು ಮಾಡಿಕೊಡಲಾಗುವುದು ಎಂದು ಕಿಶೋರ್ ಆಳ್ವ ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಯೋಜನೆಗಳು ರೂಪಿಸಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉತ್ತೇಜನ ನೀಡಲು ಹಾಗೂ ಅವರು ಶಿಕ್ಷಣವನ್ನು ಪೂರ್ಣಗೊಳಿಸಲು ಪ್ರತಿ ವರ್ಷ ಅದಾನಿ ಫೌಂಡೇಶನ್ ಕಾಪು ತಾಲೂಕಿನ ಸುಮಾರು ೮೦ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಪರಿಕರಗಳನ್ನು ವಿತರಿಸುತ್ತಿದೆ. ಇದಲ್ಲದೆ ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕವನ್ನು ಅದಾನಿ ಸಮೂಹ ಭರಿಸುತ್ತಿದೆ. ಅದಾನಿ ಫೌಂಡೇಶನ್‌ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಉತ್ತೇಜನೆ ನೀಡುತ್ತಿದೆ ಎಂದು ಆಳ್ವ ಈ ಸಂದರ್ಭದಲ್ಲಿ ಹೇಳಿದರು.
ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ ಶೆಟ್ಟಿ (KAUP MLA Suresh Shetty Gurme) ಮಾತನಾಡಿ, ಅದಾನಿ ಯುಪಿಸಿಎಲ್ ಸಂಸ್ಥೆಯ ಸಿಎಸ್‌ಆರ್ ಯೋಜನೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆದೊಡ್ಡ ಕೊಡುಗೆ ನೀಡಿ ಶಿಕ್ಷಣದ ಮಹತ್ವದ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದೆ. ಅದಾನಿ ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿವೇತನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಪ್ರೇರಣೆಯಾಗಿದೆ. ಈ ಕಾರ್ಯಕ್ರಮ ವಿದ್ಯಾರ್ಥಿಸ್ನೇಹ ಹಾಗೂ ಭಾವನಾತ್ಮಕ ಕಾರ್ಯಕ್ರಮ ಎಂದು ಬಣ್ಣಿಸಿದರು.
ಈಗಿನ ವಿದ್ಯಾರ್ಥಿಗಳು ವಿದ್ಯೆಯನ್ನುಕಲಿಯುವುದರ ಜೊತೆಗೆ ಆಂತರಿಕವಾಗಿ ಗಟ್ಟಿಯಾಗಿ, ಒಳ್ಳೆ ಸಂಸ್ಕೃತಿಯನ್ನು ಕಲಿತು ದುಶ್ಚಟದಿಂದ ದೂರವಿದ್ದು ಪೋಷಕರಿಗೆ ನೆರವಾಗ ಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದರು.
ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರವಿರಾಜ್‌ರಾವ್ ಎಲ್ಲೂರು, ದೇವಿಪ್ರಸಾದ್ ಶೆಟ್ಟಿ ಬೆಳಪು(Belapu Deviprasd Shetty), ಶಶಿಕಲಾ ಪಡುಬಿದ್ರಿ, ಶಿವಕುಮಾರ್ ಮೆಂಡನ್ ಬಡಾ ಉಚ್ಚಿಲ, ಮಮತಾ ದಿವಾಕರ್ ಪೂಂಜಾ ಬಳಕುಂಜೆ, ಪ್ರಸಾದ್ ಶೆಟ್ಟಿ ಮಜೂರು, ಜನಾರ್ಧನ ಆಚಾರ್ಯ ಕುತ್ಯಾರು, ನಮಿತಾ ಮುದರಂಗಡಿ, ಸರೀತಾ ಶೆಟ್ಟಿ ಇನ್ನಾ, ತೆಂಕ ಪಂ ಉಪಾಧ್ಯಕ್ಷೆ ಕಸ್ತೂರಿ ಪ್ರವೀಣ್, ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಯೇಶ್ವರ ಪೈ, ಬೆಳಗಾವಿ ಮತ್ತು ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಅದಾನಿ ಫೌಂಡೇಶನ್‌ನ ಸಿಬ್ಬಂಧಿ ವರ್ಗದವರಾದ ಅನುದೀಪ್ ಪೂಜಾರಿ, ಶುಭಮಂಗಳ ಎರ್ಮಾಳ್, ಯಶವಂತ್ ಆಂಚನ್ ಉಪಸ್ಥಿತರಿದ್ದರು.
ಯುಪಿಸಿಎಲ್ ಕಂಪನಿಯ ಏಜಿಎಂ ರವಿ ಆರ್. ಜೇರೆ (UPCL AGM Ravi Jeere)ಸ್ವಾಗತಿಸಿದರು.
ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

