ರಾಜ್ಯದಲ್ಲಿ ಇನ್ನು ಕೋಳಿ ಅಂಕ ಮಾಡುವಂತಿಲ್ಲ: ಡಿಜಿಪಿ ಆದೇಶ
ಬೆಂಗಳೂರು: ರಾಜ್ಯದಲ್ಲಿ ನಿರಂತರ ಕೋಳಿ ಅಂಕದ ಜೂಜಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕೋಳಿ ಅಂಕ ನಿಷೇಧಿಸಿದ್ದಾರೆ.
ರಾಷ್ಟ್ರೀಯ ಪರಿಸರ ಒಕ್ಕೂಟವು ಕೋಳಿ ಅಂಕದಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ ಅವರು, ಕೋಳಿ ಅಂಕವನ್ನು ನಿಷೇಧಿಸಿದ ಬಗ್ಗೆ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕೆಂದು ಆದೇಶಿಸಿದ್ದಾರೆ.
ಕರಾವಳಿ ಭಾಗದಲ್ಲಿ ಸಂಪ್ರದಾಯದ ಹೆಸರಿನಲ್ಲಿ ಕೋಳಿ ಅಂಕ ಆಯೋಜಿಸಿ ಪ್ರತಿನಿತ್ಯ ಕೋಟ್ಯಂತರ ರೂ. ಮೌಲ್ಯದ ಜೂಜಾಟ ನಡೆಯುತ್ತಿದೆ. ದಿನದ 24ಗಂಟೆಯೂ ಎಡೆಬಿಡದೆ ಕೋಳಿ ಅಂಕ ನಡೆಯುತ್ತಿದ್ದು, ವಿದ್ಯಾರ್ಥಿಗಳು, ಯುವ ಸಮುದಾಯ ಈ ಜೂಜಿಗೆ ಬಲಿಯಾಗುತ್ತಿದ್ದಾರೆ. 10 ರೂ.ನಿಂದ ಆರಂಭವಾಗುವ ಈ ಜೂಜು 5 ಲಕ್ಷ ರೂ.ವರೆಗೂ ನಡೆಯುತ್ತಿದೆ. ಕರಾವಳಿ ಭಾಗದ ದೊಡ್ಡ ದೊಡ್ಡ ಜಾತ್ರೆಯಲ್ಲಿ ಒಂದೊಂದು ಕೋಳಿಗಳ ಮೇಲೆ ಮೆಡಲ್ ಹೆಸರಿನಲ್ಲಿ 1ರಿಂದ 5 ಲಕ್ಷ ರೂ. ವರೆಗೂ ಜೂಜು ನಡೆಯುತ್ತಿದೆ. ರಾಜ್ಯದಲ್ಲಿ ಪ್ರತಿನಿತ್ಯ ಕೋಳಿ ಅಂಕದಿಂದ 10 ಸಾವಿರಕ್ಕೂ ಅಧಿಕ ಕೋಳಿಗಳು ಬಲಿಯಾಗುತ್ತಿದೆ.
ಕಂಬಳ ಗದ್ದೆಯ ಪಕ್ಕದಲ್ಲಿಯೇ ಜೂಜಾಟ: ಕರಾವಳಿಯಲ್ಲಿ ನಡೆಯುತ್ತಿರುವ ಕಂಬಳ ಕ್ರೀಡೆಯ ನೆಪದಲ್ಲೂ ಕೋಳಿ ಅಂಕ, ಜುಗಾರಿ ಆಟ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೂ ತಡೆಯೊಡ್ಡುವ ಕೆಲಸ ಆಗಬೇಕಿದೆ.
ರಾಜ್ಯದ ಕರಾವಳಿ ಭಾಗಕ್ಕೆ ತಮಿಳುನಾಡಿನ ಈರೋಡ್, ಸೇಲಂ ಕಡೆಯಿಂದ ಅಂಕದ ಕೋಳಿಗಳನ್ನು ತರಲಾಗುತ್ತಿದೆ. ಅಂಕದ ಒಂದು ಕೋಳಿಯ ಬೆಲೆ 3 ಸಾವಿರ ರೂನಿಂದ 25ಸಾವಿರ ರೂ. ಇರುತ್ತದೆ. ತಮಿಳುನಾಡಿನಿಂದ ಕೋಳಿಗಳನ್ನು ತಂದು ಇಲ್ಲಿಯೇ ವ್ಯಾಪಾರ ಮಾಡುವ ಜನರು ಬಹಳಷ್ಟಿದ್ದಾರೆ. ಇದು ಬಹುದೊಡ್ಡ ವ್ಯಾಪಾರವಾಗಿಯೂ ಬೆಳೆದಿದೆ. ಕೋಳಿ ಅಂಕ ನಿಷೇಧದಿಂದ ಈ ವ್ಯಾಪಾರಕ್ಕೆ ಕಲ್ಲು ಬೀಳುವುದು ಖಚಿತ.

