ಸೌಜನ್ಯಾಳ ನ್ಯಾಯಕ್ಕಾಗಿ ‘ನೋಟಾ’ ಜಾಗೃತಿ ಅಭಿಯಾನ: ಉಡುಪಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ
(Udupi) ಉಡುಪಿ: ಉಜಿರೆಯ ಎಸ್ ಡಿಎಂ ಕಾಲೇಜಿನ 17 ವರ್ಷದ ಹೆಣ್ಣುಮಗಳು ಸೌಜನ್ಯ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆಯಾಗಿ 11 ವರ್ಷಗಳು ಕಳೆದಿದ್ದು, ಯಾವ ಪಕ್ಷದ ನಾಯಕರೂ ಇದಕ್ಕೆ ಸ್ಪಂಧಿಸಿಲ್ಲವಾದ್ದರಿಂದ ನೋಟ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarodi) ಹೇಳಿದ್ದಾರೆ.
ಅವರು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸೌಜನ್ಯಳನ್ನು ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆ ಮಾಡಿದ ನೈಜ ಅಪರಾಧಿಗಳ ಬಂಧನ ಇನ್ನೂ ಆಗಿಲ್ಲ. ಸೌಜನ್ಯ ತಾಯಿ ಕುಸುಮಾವತಿ ನ್ಯಾಯಕ್ಕಾಗಿ ಹರಿಸಿದ ಕಣ್ಣೀರು ಅಧಿಕಾರದಲ್ಲಿರುವ ಯಾವ ಪಕ್ಷದ ನಾಯಕರಿಗೂ ಕಾಣಲಿಲ್ಲ. ಹೆತ್ತಕರುಳಿನ ಕೂಗು ಇವರಿಗೆ ಕೇಳಿಸಲಿಲ್ಲ.ಇದೀಗ ಸೌಜನ್ಯಾ ಕುಟುಂಬದ ನ್ಯಾಯಕ್ಕಾಗಿ ನೋಟ ಅಭಿಯಾನ ಅರಂಭಿಸಿದ್ದು ಅದಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗಿದೆ ಎಂದು ತಿಮರೋಡಿ ಹೇಳಿದರು.
ಕರಾವಳಿಯಾದ್ಯಂತ ಮತದಾರರು ‘ನೋಟ’ಕ್ಕೆ ಮತ ನೀಡುವಂತೆ ಜನಜಾಗೃತಿ ಪ್ರಾರಂಭಿಸಿದ್ದೇವೆ. ನೋಟ, ಚುನಾವಣಾ ಆಯೋಗವೇ ಜನರಿಗೆ ನೀಡಿರುವ ಅಧಿಕಾರ. ಮತದಾನ ಬಹಿಷ್ಕಾರ ಮಾಡುವುದು ತಪ್ಪು. ಆದರೆ ನೋಟ ಚಲಾಯಿಸುವ ಮೂಲಕ ನಾವು ರಾಜಕೀಯ ಪಕ್ಷಗಳಿಗೆ ಸಂದೇಶ ನೀಡಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಅಭಿಯಾನ ಆರಂಭಿಸಿದ್ದು, ಸೌಜನ್ಯಳಿಗೆ ನ್ಯಾಯ ಬಯಸುವ ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಕೈಜೋಡಿಸಬೇಕು.
ಈಗಾಗಲೇ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಸಹಿತ ಹಿಂದೂ ಸಂಘಟನೆಗಳು, ದಲಿತ ಸಂಘಟನೆಗಳೂ ಸೇರಿದಂತೆ ಹಲವು ಸಂಘಟನೆಗಳು ನಮಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಮರೋಡಿ ಹೇಳಿದ್ದಾರೆ.

