
ಅಸೋಸಿಯೇಶನ್ ಆಫ್ ಸಿವಿಲ್ ಎಂಜಿನಿಯರಿಂಗ್ ಮೂಲ್ಕಿ ಸಮಾರಂಭ ಉದ್ಘಾಟಿಸಿದ ಐಕಳ ಹರೀಶ್ ಶೆಟ್ಟಿ
ಮೂಲ್ಕಿ: ಸಾಮಾಜಿಕ ಅಭಿವೃದ್ಧಿಯ ಮಹತ್ತರ ಉದ್ದೇಶದೊಂದಿಗೆ ಆರಂಭಿಸಲಾದ ಸಂಸ್ಥೆಯಿಂದ ಎಲ್ಲರಿಗೂ ಒಳಿತಾಗಲಿ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಮೂಲ್ಕಿ ಸುಂದರರಾಮ ಶೆಟ್ಟಿ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ ಅಸೋಸಿಯೇಶನ್ ಆಫ್ ಸಿವಿಲ್ ಎಂಜಿನಿರ್ಸ್ ಮೂಲ್ಕಿಯ ಉದ್ಘಾಟನೆ, ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಸೋಸಿಯೇಶನ್ ಸ್ಥಾಪಕ ಅಧ್ಯಕ್ಷ ಜೀವನ್ ಕೆ.ಶೆಟ್ಟಿ ಮತ್ತವರ ತಂಡಕ್ಕೆ ಪದಗ್ರಹಣ ನೆರವೇರಿಸಿದ ಎಸಿಸಿಇಐ ಕೇಂದ್ರ ಸಮಿತಿಯ ಸೆಕ್ರೆಟರಿ ಜನರಲ್ ರಾಜೇಂದ್ರ ಕಲ್ಬಾವಿ ಮಾತನಾಡಿ, ಅನುಭವಗಳನ್ನು ಹಂಚಿಕೊಳ್ಳಲು ಸಂಘಟನೆ ಅತ್ಯವಶ್ಯಕ. ಒಗ್ಗಟ್ಟಿನ ಮೂಲಕ ಸಂಘಟನೆ ಬಲಯುತವಾಗುತ್ತದೆ. ನಗರಾಭಿವೃದ್ಧಿಯ ಉದ್ದೇಶದೊಂದಿಗೆ ಆರಂಭಗೊಂಡ ಸಂಸ್ಥೆಯು ರಾಷ್ಟ್ರಮಟ್ಟದವರೆಗೆ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಮುಖ್ಯ ಅತಿಥಿ ಎಮ್‌ಎಲ್‌ಸಿ ಎಸ್.ಎಲ್. ಭೋಜೇಗೌಡ ಮಾತನಾಡಿ, ಇಂದು ಶಿಕ್ಷಣ ಮತ್ತು ಆರೋಗ್ಯ ಉಳ್ಳವರ ಪಾಲಾಗಿದೆ. ಸಾಮರಸ್ಯದ ಬದುಕಿನ ಅವಶ್ಯಕತೆ ಇದೆ. ಸಾಮಾಜಿಕ ಸಮಾನತೆಗಾಗಿ ಸಂಸ್ಥೆಯು ಕಾರ್ಯುನಿರ್ವಹಿಸಲಿ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಒಗ್ಗಟ್ಟಿನ ಮೂಲಕ ಸಕಲವನ್ನು ಸಾಸಬಹುದು. ಸಾಮಾಜಿಕ ಒಳಿತಿಗಾಗಿ ಹುಟ್ಟಿಕೊಂಡ ಸಂಸ್ಥೆಯಿಂದ ಜನಸಾಮಾನ್ಯರಿಗೆ ಒಳಿತಾಗಲಿ ಎಂದರು.
ನೂತನ ಅಧ್ಯಕ್ಷರಾಗಿ ಅಕಾರ ಸ್ವೀಕರಿಸಿದ ಅಸೋಸಿಯೇಶನ್ ಸಾಪಕಾಧ್ಯಕ್ಷ ಜೀವನ್ ಕೆ.ಶೆಟ್ಟಿ ಮಾತನಾಡಿ, ನಮ್ಮೊಳಗಿನ ಸ್ಪರ್ಧೆಯನ್ನು ಬಿಟ್ಟು ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಅನುಭವಗಳನ್ನು ಸರಕಾರ ಮತ್ತು ಜನಪ್ರತಿನಿಗಳಿಗೆ ಧಾರೆ ಎರೆಯುವುದೇ ನಮ್ಮ ಉದ್ದೇಶವಾಗಿದೆ. ಯಾವುದೇ ಕಾರಣಕ್ಕೂ ಸರಕಾರ ಮತ್ತು ಆಡಳಿತವನ್ನು ಪ್ರಶ್ನಿಸುವುದಿಲ್ಲ ಎಂದರು.
ಸನ್ಮಾನ: ಹಿರಿಯ ಸಿವಿಲ್ ಎಂಜಿನಿಯರ್ ಪ್ರೊ. ಜಿ.ವಿ.ರೈಯವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಉಡುಪಿ ಕ್ರೆಡಾಯಿ ಅಧ್ಯಕ್ಷ ಕೆ.ಮನೋಹರ ಶೆಟ್ಟಿ ಸಾಯಿರಾಧ, ಮಂಗಳೂರು ಕ್ರೆಡಾಯಿ ಅಧ್ಯಕ್ಷ ವಿನೋದ್ ಎ. ಆರ್. ಪಿಂಟೋ, ಎಸಿಸಿಇಐ ಮಾಜಿ ಸೆಕ್ರೆಟರಿ ಜನರಲ್ ವಿಜಯವಿಷ್ಣು ಮಯ್ಯ, ಉಡುಪಿ ಎಸಿಸಿಇಎ ಅಧ್ಯಕ್ಷ ಪಾಂಡುರಂಗ ಆಚಾರ್ಯ, ಮಂಗಳೂರು ಎಸಿಸಿಇಎ ಅಧ್ಯಕ್ಷ ಉಜ್ವಲ್ ಡಿಸೋಜಾ, ಮಂಗಳೂರು ಇನ್ಸಿಟ್ಯೂಶನ್ ಆಫ್ ಎಂಜಿನಿರ‍್ಸ್ ಕಾರ್ಯದರ್ಶಿ ಬಸವರಾಜ್, ಮಂಗಳೂರು ಕನ್ಸ್ಟ್ರಕ್ಷನ್ ಅಸೋಸಿಯೇಶನ್ ಅಧ್ಯಕ್ಷ ಮಹಾಬಲ ಎಮ್., ಉದ್ಯಮಿಗಳಾದ ಶಿವರುದ್ರಪ್ಪ ಮತ್ತು ರೊನಾಲ್ಡ್ ಸ್ಟೀವನ್ ಡಿಸೋಜಾ ಮುಖ್ಯ ಅತಿಥಿಗಳಾಗಿದ್ದರು.
ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸುಜಿತ್ ಎಸ್. ಸಾಲ್ಯಾನ್ ಪ್ರಸ್ತಾವಿಸಿ ಸ್ವಾಗತಿಸಿದರು.
ಜೇಸಿಐ ವಲಯ ಪೂರ್ವಾಧ್ಯಕ್ಷೆ ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
