
ಅಹಿಂಸಾ ಸಂದೇಶಕ್ಕಾಗಿ ಮೂರು ರಾಜ್ಯಗಳಿಗೆ 12 ದಿನಗಳ ಬೈಕ್ ರ್ಯಾಲಿ
(Kaup) ಕಾಪು : ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರನ್ನು ಎಚ್ಚರಿಸುವುದಕ್ಕಾಗಿ, 12 ದಿನಗಳ ಬೈಕ್ ರ್ಯಾಲಿಯನ್ನು ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಹಮ್ಮಿಕೊಂಡಿದೆ ಎಂದು ವನಸುಮ ಟ್ರಸ್ಟ್ ಅಧ್ಯಕ್ಷರಾದ ಬಾಸುಮ ಕೊಡಗು ಹೇಳಿದರು.
ಅವರು ಅವರು ಶುಕ್ರವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದೃಶಾ ಕೊಡಗು ಮತ್ತು ಉಜ್ವಲ್ ಕಾಮತ್ ಮೂರು ರಾಜ್ಯಗಳಲ್ಲಿ ಮೂರು ಸಾವಿರ ಕಿಲೋಮೀಟರ್ ಬೈಕ್ ಮೂಲಕ ಈ ಸಂದೇಶ ಜಾಥಾವನ್ನು ಕೈಗೊಳ್ಳಲಿದ್ದಾರೆ. ಜೇಸಿಐ ಉಡುಪಿ ಸಿಟಿ ಮತ್ತು ಜೇಸಿಐ ಕಟಪಾಡಿ ಈ ರ್ಯಾಲಿಯ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದು, ಹಿರಿಯ ಜೇಸಿ ಬಾಸುಮ ಕೊಡಗು ಮಾರ್ಗದರ್ಶನದಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ 50 ಕ್ಕೂ ಹೆಚ್ಚು ಜೇಸೀ ಘಟಕಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ.
ಎಲ್ಲಾ ಕಡೆಗಳಲ್ಲಿ ಕೌಟುಂಬಿಕ ಮತ್ತು ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಲಾಗುತ್ತದೆ. ಮತ್ತು ತಜ್ಞರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಈ ರ್ಯಾಲಿಗೆ ಮೇ 25 ರಂದು ಬೆಳಿಗ್ಗೆ 7.30 ಕ್ಕೆ ಕಾಪು ಹೊಸ ಮಾರಿಗುಡಿ ಆವರಣದಲ್ಲಿ ಚಾಲನೆ ನೀಡಲಾಗುತ್ತದೆ. ಕಾಪು ಹೊಸಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಲಾಲಾಜಿ ಮೆಂಡನ್, ಜೆಸಿ ವಲಯ ೧೫ ರ ಅಧ್ಯಕ್ಷ ಅಭಿಲಾಷ್, ಯೋಗೀಶ್ ಶೆಟ್ಟಿ ಹಾಗೂ ಕಾಪು ಪೋಲಿಸ್ ಸಬ್ ಇನ್ಸ್ಪೆಕ್ಟರ್ ತೇಜಸ್ವಿ ಇವರುಗಳು ಉಪಸ್ಥಿತರಿದ್ದು ರ್ಯಾಲಿಗೆ ಚಾಲನೆ ನೀಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವನಸುಮ ಟ್ರಸ್ಟ್ ಸಂಚಾಲಕಿ ಕಾವ್ಯವಾಣಿ ಕೊಡಗು, ಭಾಸ್ಕರ್ ಉದ್ಯಾವರ, ದೃಶಾ ಕೊಡಗು ಮತ್ತು ಉಜ್ವಲ್ ಕಾಮತ್ ಉಪಸ್ಥಿತರಿದ್ದರು.

