ಆಳ್ವಾಸ್ ಕಾಲೇಜಿನಲ್ಲಿ ಕಾರಂತರ ಕೃತಿಗಳ ಸ್ವರೂಪ ಕುರಿತ ಅಧ್ಯಯನ ಶಿಬಿರ
ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಆಳ್ವಾಸ್ ಕಾಲೇಜು ಸಹಭಾಗಿತ್ವ
(Moodabidri) ಮೂಡಬಿದ್ರಿ : ಜೀವನ ಅನುಭವ ಕಾರಂತರ ಕೃತಿಗಳ ಜೀವಾಳ ವೈಚಾರಿಕ ಮನೋಭಾವ ವೈಜ್ಞಾನಿಕ ದೃಷ್ಟಿ ಕಾರಂತರ ಕೃತಿಗಳ ಬಹುಮುಖ್ಯ. ತನ್ನ ನಡೆ ಮತ್ತು ನುಡಿಯಲ್ಲಿ ಜೀವನದುದ್ದಕ್ಕೂ ಶುದ್ಧಿಯನ್ನು ಕಾಪಾಡಿಕೊಂಡು ಬಂದವರು ಕಾರಂತರು ಎಂದು ಸಾಹಿತಿ ಬಿ ಜನಾರ್ದನ ಭಟ್ ಹೇಳಿದ್ದಾರೆ.
ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಕಾರಂತರ ಕೃತಿಗಳ ಸ್ವರೂಪ ಕುರಿತ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೃತಿಗೆ ಒಂದು ಭಾಷೆ ಇರುವಂತೆ, ಅದಕ್ಕೊಂದು ವಸ್ತುವೂ ಇದೆ. ಬದುಕಿನ ವಿವಿಧ ಆಯಾಮಗಳನ್ನು ಕಾರಂತರು ತನ್ನ ಕೃತಿಯ ವಸ್ತುವನ್ನಾಗಿ ಸ್ವೀಕರಿಸಿ ವೈವಿಧ್ಯಮಯ ಸಾಹಿತ್ಯ ರಚನೆಯ ಮೂಲಕ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಆಶಯದ ಮಾತುಗಳನ್ನಾಡಿದ ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಗಣನಾಥ ಎಕ್ಕಾರು, ʼಕಾರಂತರು ಬಹು ಮುಖಿ ಅಸಕ್ತಿಗಳ ಮೂಲಕ ತನ್ನ ಜೀವನದ ಕೊನೆಯವರೆಗೂ ಕ್ರಿಯಾಶೀಲವಾಗಿದ್ದ ದೈತ್ಯ ಪ್ರತಿಭೆ. ಬಾಳ್ಯ ಸ್ವೀಕಾರಕ್ಕೆ ಇದೆ ನಿರಾಕರಣೆಗಲ್ಲʼ ಎಂದು ನಂಬಿದವರು ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ಅಧ್ಯಕ್ಷತೆ ವಹಿಸಿದ್ದರು.
ಅವರು ಮಾತನಾಡಿ, ಆಧುನಿಕ ಸೌಲಭ್ಯಗಳು ಯಥೇಚ್ಛವಾಗಿರುವ ವರ್ತಮಾನ ಕಾಲದಲ್ಲಿ, ಮನುಷ್ಯ ತನ್ನ ಮೆದುಳನ್ನು ಉಪಯೋಗಿಸುವುದು ದಿನೇ ದಿನೇ ಕಡಿಮೆಯಾಗುತ್ತಿದೆ. ಈ ಮೂಲಕ ಮನುಷ್ಯನನ್ನು ಯಂತ್ರಗಳು ನಿಯಂತ್ರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಕಾರಂತರನ್ನು ಓದುವ ಮೂಲಕ ಮನಸ್ಸು ಸ್ವತಂತ್ರ ಚಿಂತನೆಗೆ ತೆರೆದುಕೊಳ್ಳುತ್ತದೆ, ಮಾನವೀಯಗೊಳ್ಳುತ್ತದೆ ಎಂದರು.
ಡಾ. ಬಿ ಜನಾರ್ದನ ಭಟ್, ಡಾ.ಗಣನಾಥ ಎಕ್ಕಾರು, ಹರೀಶ್ ಟಿ ಜಿ ಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಬಿರವನ್ನು ನಡೆಸಿಕೊಟ್ಟರು.
ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ, ಪೂರ್ಣಿಮಾ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ವಂದಿಸಿದರು.

