ಉಚ್ಚಿಲ : ಐದು ತಿಂಗಳು ಕಳೆದರೂ ಬಗೆಹರಿಯದ ಹೆದ್ದಾರಿ ಸಮಸ್ಯೆ, ಪ್ರತಿಭಟನೆಯ ಎಚ್ಚರಿಕೆ
(Uchila) ಉಚ್ಚಿಲ : ರಾಷ್ಟ್ರೀಯ ಹೆದ್ದಾರಿ ಉಚ್ಚಿಲದಲ್ಲಿ ನಿರಂತರ ಅಪಘಾತ ಉಂಟಾಗುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಸರಿಪಡಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆ ಈಡೇರಿಸುವ ಭರವಸೆ ದೊರಕಿ ಆರು ತಿಂಗಳಾದರೂ ಫಲಿತಾಂಶ ಮಾತ್ರಾ ಶೂನ್ಯವಾಗಿದೆ.
ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದೆ. ಇದರಿಂದ ನಿರಂತರ ಅಪಘಾತಗಳು ನಡೆಯುತಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಕಳೆದ ಜನವರಿ ತಿಂಗಳಲ್ಲಿ ಉಚ್ಚಿಲ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ, ಹೆದ್ದಾರಿ ತಡೆ ನಡೆಸಿ ಬೇಡಿಕೆ ಸಲ್ಲಿಸಲಾಗಿತ್ತು.
ಪ್ರತಿಭಟನೆಯ ವೇಳೆ ಬೇಡಿಕೆ ಈಡೇರಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಭರವಸೆಯನ್ನು ನೀಡಿದ್ದರು. ಆದರೆ ತಿಂಗಳು ಆರು ಕಳೆದರೂ ಕೆಲ ಬೇಡಿಕೆಗಳನ್ನು ಹೊರತುಪಡಿಸಿ ಉಳಿದ ಬೇಡಿಕೆಗಳು ಭರವಸೆಯಾಗಿಯೇ ಉಳಿದಿದೆ ಎಂದು ನಾಗರಿಕ ಹೋರಾಟ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ನಾಗರಿಕ ಹೋರಾಟ ಸಮಿತಿಯು ಮುಂದಿಟ್ಟಿದ್ದ ಬೇಡಿಕೆಗಳ ಪೈಕಿ ಸರ್ವಿಸ್ ರಸ್ತೆಯ ಡಿವೈಡರ್‌ನ ಮಧ್ಯೆ ಕಬ್ಬಿಣದ ತಡೆಬೇಲಿ ಅಳವಡಿಸಲಾಗಿದ್ದು, ಸರ್ವಿಸ್ ರಸ್ತೆಯ ಸೂಕ್ತ ಸ್ಥಳಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿರುವುದು ಹೊರತುಪಡಿಸಿ ಬೇರೆ ಯಾವುದೇ ಬೇಡಿಕೆ ಈಡೇರಿಸಿಲ್ಲ ಎಂದು ಸಮಿತಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಅಪಘಾತದಿಂದ ರಕ್ಷಿಸಲು ಈಗ ಹಾಕಲಾದ ತಡೆ ಬೇಲಿಯನ್ನು ತೆಗೆದು ಸರ್ವೀಸ್ ರಸ್ತೆಯ ಇಕ್ಕಡೆಗಳಲ್ಲೂ ಅಳವಡಿಸ ಬೇಕು. ಕಟಪಾಡಿ ಮಾದರಿಯಲ್ಲಿ. ಆಗ ಅಪಘಾತದ ಸಂಖ್ಯೆ ಕಡಿಮೆ ಆಗ ಬಹುದು.
ಉಚ್ಚಿಲ ರಾಹೆ ೬೬ರ ಪಕ್ಕದಲ್ಲಿಯೇ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಇದ್ದು, ಇಲ್ಲಿಗೆ ನೂರಾರು ಭಕ್ತಾಧಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುತ್ತಿದ್ದು, ಇಲ್ಲಿ ರಸ್ತೆ ದಾಟುವುದೇ ಸಮಸ್ಯೆಯಾಗಿದೆ.
ಹೆದ್ದಾರಿ ಪಕ್ಕದಲ್ಲಿಯೇ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸರಸ್ವತಿ ಮಂದಿರ ಶಾಲೆ, ರಾಘವೇಂದ್ರ ಮಠ ಇದೆ. ಇಲ್ಲಿ ದಿನ ನಿತ್ಯ ನಾರೂರು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ದಾಟುವುದರಿಂದ ಸಹಜವಾಗಿಯೇ ಇದು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಹಾಗಾಗಿ ಇಲ್ಲಿಅಂಡರ್‌ಪಾಸ್ ನಿರ್ಮಿಸಬೇಕಾಗಿದೆ ಎಂಬುದು ಇಲ್ಲಿನ ನಾಗರಿಕರ ಒಕ್ಕೊರಲಿನ ಒತ್ತಾಯವಾಗಿದೆ.
ಪ್ರತಿಭಟನೆಯ ಎಚ್ಚರಿಕೆ: ಕಳೆದ ಜನವರಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಸಹಿತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ.
ಉಚ್ಚಿಲದಲ್ಲಿ ಹೆದ್ದಾರಿಯಲ್ಲಿರುವ ಬೀದಿ ದೀಪಗಳನ್ನು ತೆಗೆದು ಹೆಚ್ಚು ಪ್ರಖರ ಬೀದಿ ದೀಪಗಳನ್ನು ಅಳವಡಿಸಬೇಕು. ರಸ್ತೆಯ ಮಧ್ಯೆ ಉಚ್ಚಿಲ ಪೇಟೆಯಲ್ಲಿ ೩೦೦ ಮೀಟರ್ ಉದ್ದಕ್ಕೆ ಬ್ಯಾರಿಕೇಡ್ ನಿರ್ಮಿಸಿ ಜನರು ರಸ್ತೆ ದಾಟಲು ವ್ಯವಸ್ಥೆ ಮಾಡಬೇಕು. ಉಚ್ಚಿಲ ಪೇಟೆ ಮಧ್ಯಭಾಗದಲ್ಲಿ ರಸ್ತೆ ವಿಭಾಜಕ ಓಪನ್ ಮಾಡಲು ಕ್ರಮವಹಿಸಬೇಕು. ರಸ್ತೆಯಲ್ಲಿ ಬ್ಲಿಂಕರ್ಗಳು, ಸುರಕ್ಷತಾ ಸೂಚನಾ ಫಲಕಗಳು, ವೇಗ ನಿಯಂತ್ರಣ ಸೂಚನಾ ಫಲಕಗಳು, ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು. ಉಚ್ಚಿಲ ಪೇಟೆಯಲ್ಲಿ ಹೈಮಾಸ್ಟ್ ದೀಪ ಅಳವಡಿಸುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಸಮಿತಿಯು ಈಗಾಗಲೇ ಶಿಫಾರಸು ಮಾಡಿದೆ.
ಉಚ್ಚಿಲ ಸರ್ವೀಸ್ ರಸ್ತೆಯಲ್ಲಿಯ ಅವೈಜ್ಙಾನಿಕ ಡಿವೈಡರ್ನಿಂದಾಗಿ, ಸರ್ವೀಸ್ ರಸ್ತೆಯಲ್ಲಿ ಬಂದವರು ಕೊಪ್ಪಲಂಗಡಿಗೆ ಹೋಗಿ ಅಲ್ಲಿಂದ ವಾಪಾಸು ಬರಬೇಕಿದೆ. ಆದರೆ ಮೂಳೂರಿನ ಸಾಗರ್ ಹೊಟೇಲ್ ಎದುರು ಡಿವೈಡರ್ ನೀಡಿದಲ್ಲಿ ಜನರಿಗೆ ತೊಂದರೆ ಆಗದು. ಈಗಾಗಲೇ ಹೆದ್ದಾರಿ ಇಲಾಖಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಜಾಗ ಗುರುತಿಸಿಕೊಂಡಿದೆ.
ಈ ತರಹದ ಅವೈಜ್ಞಾನಿಕ ಡಿವೈಡರಿನಿಂದ ಸುತ್ತು ಬಳಸಿ ಬರುವುದರಿಂದ ರಿಕ್ಷಾದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹೆಚ್ಚಿನ ಹೊರೆ ಬೀಳುತ್ತದೆ. ಕೆಲವೊಂದು ವಾಹನ ಸವಾರರು ವಿರುದ್ಧ ದಿಕ್ಕಿನಿಂದ ಸಂಚರಿಸಿ, ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಸಾಗರ್ ಹೊಟೇಲ್ ಎದುರು ಡಿವೈಡರ್ ಮಾಡಬೇಂದು ಸಾರ್ವಜನಿಕರ ಆಗ್ರಹವಾಗಿದೆ.
ಈಗಾಗಲೇ ಜಿಲ್ಲಾಧಿಕಾರಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಜನರಿಗೆ ತೊಂದರೆ ಆಗುವ ರೀತಿಯಲ್ಲಿ ಉಚ್ಚಿಲ ನಾಗರೀಕರನ್ನು ನಡೆಸಿಕೊಂಡರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಹೋರಾಟ ಸಮಿತಿಯ ಅಧ್ಯಕ್ಷ ಸಿರಾಜ್ ಉಚ್ಚಿಲ ಎಚ್ಚರಿಸಿದ್ದಾರೆ.

