ಎ.23ರಿಂದ ಮೇ 14: ಪಡುಬಿದ್ರಿ ದೇಗುಲದ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿಯವರಿಂದ ಪತ್ರಿಕಾಗೋಷ್ಠಿ
(ಚಿತ್ರ ಕೃಪೆ: ರವಿ ಡಿಜಿಟಲ್ಸ್, ಪಡುಬಿದ್ರಿ)
(Padubidri) ಪಡುಬಿದ್ರಿ: ಸರ್ವ ಸುಸಜ್ಜಿತವಾಗಿ ಪುನರ್‌ನಿರ್ಮಾಣಗೊಂಡ ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಎಪ್ರಿಲ್ 23 ಗುರುವಾರದಿಂದ ಮೇ 14 ಗುರುವಾರದವರೆಗೆ ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರೀ ಮಹಾಗಣಪತಿ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಮಹಾರಥೋತ್ಸವವು ಶ್ರೀ ಕ್ಷೇತ್ರದ ತಂತ್ರಿಗಳಾದ ಕೊಡವೂರು ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಋತ್ವಿಜ ಸಮೂಹದ ಸಹಭಾಗಿತ್ವದಲ್ಲಿ ದೇಶ ವಿದೇಶಗಳಿಂದ ಆಗಮಿಸುವ ಭಕ್ತಾದಿಗಳ ಸಮ್ಮುಖ ಸಂಪನ್ನಗೊಳ್ಳಲಿದೆ ಎಂದು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಬೆಂಗಳೂರು ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿಯವರು ಶ್ರೀ ದೇವಳದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಎ. 23 ಗುರುವಾರ ಬೆಳಿಗ್ಗೆ 10 ಗಂಟೆಗೆ ದಾನಿಗಳಿಂದ ಶ್ರೀ ದೇವರುಗಳಿಗೆ ಸಮರ್ಪಿಸಲ್ಪಡುವ ದಿವ್ಯಾಭರಣಗಳು ಹಾಗೂ ಇತರ ಪರಿಕರಗಳ ಶೋಭಾಯಾತ್ರೆಯು ಪಡುಬಿದ್ರಿ ಗುಂಡ್ಲಾಡಿಕಟ್ಟೆಯಿಂದ ಶ್ರೀದೇವಳಕ್ಕೆ ಆಗಮಿಸಲಿದೆ. ಸಂಜೆ 5 ಗಂಟೆಗೆ ನಡೆಯುವ ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.
ಎ. 29-30 ಶ್ರೀ ದೇವರ ಪ್ರತಿಷ್ಠೆ: ಎ. 29 ಬುಧವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬೆಳಿಗ್ಗೆ 10-27 ಗಂಟೆಗೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ, ಎ.30 ಗುರುವಾರ ಬೆಳಿಗ್ಗೆ 8.02 ಗಂಟೆಗೆ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಗಣಪತಿ ದೇವರ ಬಿಂಬ ಪ್ರತಿಷ್ಠೆ ನಡೆಯಲಿದೆ. ಮೇ. 2-3 ಬ್ರಹ್ಮ ಕುಂಭಾಭಿಷೇಕ: ಮೇ 2 ಶನಿವಾರ ಬೆಳಿಗ್ಗೆ 8. 05ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕುಂಭಾಭಿಷೇಕ, ಮೇ 3 ಭಾನುವಾರ ಬೆಳಿಗ್ಗೆ 9-49 ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕವು ನಾನಾ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಳ್ಳಲಿದೆ.
ಧಾಮಿಕ ಕಾರ್ಯಕ್ರಮಗಳು: ಶ್ರೀ ಕ್ಷೇತ್ರದಲ್ಲಿ ಎ.23 ರಂದು ನಡೆಯುವ ಋತ್ವಿಜರ ಆಗಮನ, ಸ್ವಾಗತ, ಗೇಹ ಪ್ರತಿಗ್ರಹ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ತೋರಣ ಪ್ರತಿಷ್ಠೆಯೊಂದಿಗೆ ಆರಂಭಿಸಿ ಮೇ 14ರ ಮಹಾಸಂಪ್ರೋಕ್ಷಣೆ, ಮಂಗಳ ಮಂತ್ರಾಕ್ಷತೆ, ರಾತ್ರಿ ರಂಗಪೂಜೆವರೆಗೆ ನಿತ್ಯ ಪ್ರಾತಃಕಾಲದಿಂದ ರಾತ್ರಿವರೆಗೆ ಶ್ರೀ ಕ್ಷೇತ್ರದ ತಂತ್ರಿಗಳು, ಅರ್ಚಕರು, ಋತ್ವಿಜರ ಭಾಗವಹಿಸುವಿಕೆಯಲ್ಲಿ ನಾನಾ ಯಾಗಗಳ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಭವ್ಯ ಶೋಭಾಯಾತ್ರೆ : ಎ. 23 ಗುರುವಾರ ಬೆಳಿಗ್ಗೆ 10 ಗಂಟೆಗೆ ದಾನಿಗಳಿಂದ ಶ್ರೀದೇವರುಗಳಿಗೆ ಸಮರ್ಪಿಸಲ್ಪಡುವ ದಿವ್ಯಾಭರಣಗಳು ಹಗೂ ಇತರ ಪರಿಕರಗಳ ಶೋಭಾಯಾತ್ರೆಯು ರಾಹೆ 66 ರ ಗುಂಡ್ಲಾಡಿ ಕಟ್ಟೆಯಿಂದ ಶ್ರೀ ದೇವಳಕ್ಕೆ ಹೊರಡಲಿದೆ. ಎ. 25 ಶನಿವಾರ ಸಂಜೆ 4 ಗಂಟೆಗೆ ಪಡುಬಿದ್ರಿ ಶ್ರೀ ವನದುರ್ಗಾ ಟ್ರಸ್ಟ್ ವತಿಯಿಂದ ಶ್ರೀ ಗಣಪತಿ ದೇವರ ಗರ್ಭಗುಡಿಗೆ ರಜತದ್ವಾರ ಹಾಗೂ ಶ್ರೀ ದೇವಳಕ್ಕೆ ಸಮರ್ಪಿಸಲ್ಪಡುವ ಸ್ವರ್ಣಪಲ್ಲಕ್ಕಿ ಸಮರ್ಪಣಾ ಶೋಭಾಯಾತ್ರೆಯು ನಡೆಯಲಿದೆ.
ಎಪ್ರಿಲ್ 26 ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಅವಿಭಜಿತ ದಕ ಜಿಲ್ಲೆಯಾದ್ಯಂತ ಶ್ರೀ ಕ್ಷೇತ್ರಕ್ಕೆ ಸಮರ್ಪಿಸಲ್ಪಡುವ ಹಸಿರು ಹೊರೆಕಾಣಿಕೆಗಳ ಭವ್ಯ ಶೋಭಾಯಾತ್ರೆಯು ಪಡುಬಿದ್ರಿ ಹೆದ್ದಾರಿಯ ಗುಂಡ್ಲಾಡಿ ಕಟ್ಟೆಯಿಂದ ಹೆದ್ದಾರಿಯಲ್ಲಿ ಸಾಗಿ ಪಡುಬಿದ್ರಿ ಬೀಡು ಮೂಲಕ ಶ್ರೀ ಕ್ಷೇತ್ರಕ್ಕೆ ತಲುಪಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ: ಎ.23, ಎ.25, ಎ. 27, ಎ. 29, ಮೇ 1 ಮತ್ತು 3ರಂದು ಸಂಜೆ 6 ಗಂಟೆಯಿಂದ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಬೆಂಗಳೂರು ಉದ್ಯಮಿಗಳಾದ ಡಾ.ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಮಠಾಧೀಶರುಗಳು, ಧಾರ್ಮಿಕ ಮುಖಂಡರು, ಸಚಿವರು, ಸಂಸದರು, ಉಭಯ ಜಿಲ್ಲೆಯ ಎಲ್ಲಾ ಶಾಸಕರು, ದಾನಿಗಳು, ಗಣ್ಯರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಎ. 23ರಿಂದ ಮೇ 14 ರವರೆಗೆ ನಿತ್ಯ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಾನಾ ಭಜನಾ ತಂಡಗಳಿಂದ ನಿರಂತರ ಭಜನೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ನಿತ್ಯ ಪ್ರತಿಷ್ಠಿತ ತಂಡಗಳಿಂದ ಪ್ರಸಿದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆಯಲಿದೆ. ಶ್ರೀ ಕ್ಷೇತ್ರಕ್ಕೆ ಸಂಬಂಧಿತ ವೀಡಿಯೋ, ಭಕ್ತಿಗೀತೆ ಬಿಡುಗಡೆಗೊಳ್ಳಲಿದೆ.
ಮಹಾರಥೋತ್ಸವ: ಶ್ರೀ ಕ್ಷೇತ್ರದ ಬ್ರಹ್ಮಕಲಶಾಭಿಷೇಕ ಅಂಗವಾಗಿ ಮೆ. 2 ಶನಿವಾರ ರಾತ್ರಿ 8 ಗಂಟೆಗೆ ಬ್ರಹ್ಮಕಲಶೋತ್ಸವದ ಮಹಾರಥೋತ್ಸವ ನಡೆಯಲಿದೆ. ಮೇ. 4 ರಾತ್ರಿ 9 ಗಂಟೆಗೆ ಲಕ್ಷದೀಪೋತ್ಸವ ನಡೆಯಲಿದೆ.
ಮೇ 5 ಮಂಗಳವಾರ ವಾರ್ಷಿಕ ಉತ್ಸವದ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣಗೊಂಡು, ಮೇ 10ಭಾನುವಾರ ರಾತ್ರಿ ಕೆರೆ ದೀಪೋತ್ಸವ, ಮೇ 12 ಮಂಗಳವಾರ ಮಧ್ಯಾಹ್ನ 11 ಗಂಟೆಗೆ ರಥಾರೋಹಣ, ರಾತ್ರಿ 11 ಗಂಟೆಗೆ ಮಹಾರಥೋತ್ಸವ ನಡೆಯಲಿದೆ.
ಮಹಾ ಅನ್ನಸಂತರ್ಪಣೆ: ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂಭ್ರಮದ ಅಂಗವಾಗಿ ಎ.23 ರಿಂದ ಮೇ 4ರವರೆಗೆ ಮತ್ತು ವಾರ್ಷಿಕ ಉತ್ಸವದ ಅಂಗವಾಗಿ ಮೇ 12ರಂದು ಮಧ್ಯಾಹ್ನ 12-30 ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು ಮತ್ತು ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಜೀರ್ಣೕೊದ್ಧಾರ ಸಮಿತಿಯ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಮುರಳೀನಾಥ ಶೆಟ್ಟಿ ಉಪಸ್ಥಿತರಿದ್ದರು.

