ಕಟಪಾಡಿ ಮಣಿಪುರದಲ್ಲಿ ಬಾವಿಗೆ ಬಿದ್ದಿರುವ ಚಿರತೆಯ ರಕ್ಷಣೆ
ಅಂದಾಜು 2 ರಿಂದ 3 ವರ್ಷ ಪ್ರಾಯದ ಹೆಣ್ಣು ಚಿರತೆಯ ರಕ್ಷಣೆ
(Katapady) ಕಟಪಾಡಿ: ಮಣಿಪುರ ಗ್ರಾಮದ ನಿವಾಸಿ ಜೋನ್ ಸಿಕ್ವೇರ ಎಂಬವರ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿ ಮಂಗಳವಾರ ರಾತ್ರಿ ಅಭಯಾರಣ್ಯಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.
ಜೋನ್ ಸಿಕ್ವೇರರವರ ಮನೆಯವರು ತೋಟದ ಬಾವಿಯ ಪಂಪ್ ಸ್ವಿಚ್ ಆನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಕಾಣದಾಗ, ಬಾವಿಗೆ ಇಣುಕಿದಾಗ ಚಿರತೆ ನೀರಿನಲ್ಲಿ ಒದ್ದಾಡುವುದನ್ನು ಕಂಡು ಹೌಹಾರಿದ್ದಾರೆ. ಅದು ಪಂಪ್ ಗೆ ಕಟ್ಟಿದ ಹಗ್ಗವನ್ನು ಹಿಡಿದು ಮೇಲೆ ಬರಲು ಪ್ರಯತ್ನಿಸುತ್ತಿದ್ದಾಗ ವಯರ್ ಕಿತ್ತುಹೋಗಿ ಪಂಪ್ ನಿಷ್ಕ್ರಿಯಗೊಂಡಿತ್ತು.
ಈ ಬಗ್ಗೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬಾವಿಯೊಳಗೆ ಬೋನು ಇಳಿಬಿಟ್ಟು ಚಿರತೆಯನ್ನು ಹಿಡಿದು ಮೇಲೆತ್ತಿದ್ದಾರೆ. ಅಂದಾಜು 2 ರಿಂದ 3 ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿರಬಹುದೆಂದು ಅರಣ್ಯ ಇಲಾಖೆಯವರು ಸಂಶಯ ವ್ಯಕ್ತಪಡಿಸಿದ್ದಾರೆ.
ರಕ್ಷಿಸಲಾದ ಚಿರತೆಯನ್ನು ಸೋಮೇಶ್ವರ ಅಭಯಾರಣ್ಯಕ್ಕೆ ಕೊಂಡೊಯ್ದು ಬಿಡಲಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಅವರ ಮಾರ್ಗದರ್ಶನದಲ್ಲಿ, ಉಪ ವಲಯ ಅರಣ್ಯಾಧಿಕಾರಿ ಶಿವಾನಂದ, ಗಸ್ತು ಅರಣ್ಯ ಸಿಬ್ಬಂದಿ ದೇವರಾಜ್ ಪಾಣಾ, ರಾಮಚಂದ್ರ ನಾಯಕ್, ಶ್ರೀನಿವಾಸ ಜೋಗಿ, ಮಂಜುನಾಥ್, ಅಖಿಲೇಷ ಭಾಗವಹಿಸಿದ್ದರು.

