ಪಡುಬಿದ್ರಿ: ಚಾಲಕನ ನಿಯಂತ್ರಣ ತಪ್ಪಿದ ಸ್ಕೂಟರ್ ಅಪಘಾತ, ದಂಪತಿಗೆ ಗಾಯ
ತೆಂಕ ಎರ್ಮಾಳಿನಲ್ಲಿ ರಾತ್ರಿ ನಡೆದ ಘಟನೆ
(Padubidri) ಪಡುಬಿದ್ರಿ : ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕ ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ರಾತ್ರಿ ಸ್ಕೂಟರೊಂದು ರಸ್ತೆ ಬದಿಯ ಮೈಲಿಗಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ತೀವ್ರವಾಗಿ ಗಾಯಗೊಂಡ ಘಟನೆ ಘಟಿಸಿದೆ.
ಗಾಯಗೊಂಡವರನ್ನು ಪಡುಬಿದ್ರಿ ಬೆಂಗ್ರೆಯ ನಿವಾಸಿ ಜಗದೀಶ್ ಭಂಡಾರಿ ಹಾಗೂ ಅವರ ಪತ್ನಿ ವಿನುತಾ ಎಂದು ಗುರುತಿಸಲಾಗಿದೆ.
ಇವರು ಸ್ಕೂಟರಿನಲ್ಲಿ ಪಡುಬಿದ್ರಿ ಕಡೆಯಿಂದ ಉಚ್ಚಿಲ ಕಡೆಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆಯುತ್ತೆನ್ನಲಾಗಿದೆ.
ಇದರಿಂದ ತೀವ್ರವಾಗಿ ಗಾಯಗೊಂಡ ದಂಪತಿಗಳನ್ನು ಮುಳೂರಿನ ಎಸ್ ಡಿ ಪಿ ಐ ಅಂಬುಲೆನ್ಸ್ ನಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತರಾದ ಜಮಾಲುದ್ದೀನ್ ಉಚ್ಚಿಲ, ಹಮೀದ್, ಅರ್ಶನ್ ಸಹಕರಿಸಿದ್ದಾರೆ.
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

