ಕಟಪಾಡಿ ಹೆದ್ದಾರಿಯಲ್ಲಿ ಓವರ್ – ಅಂಡರ್ ಪಾಸ್ ನಿರ್ಮಾಣಕ್ಕೆ ಪರಿಶೀಲನೆ
ಕಿನ್ನಿಮೂಲ್ಕಿ ಮಾದರಿಯಲ್ಲಿ ಸೇತುವೆ ನಿರ್ಮಾಣ
(Katapady) ಕಟಪಾಡಿ : ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ಸಮೀಪ ನಿರ್ಮಾಣಗೊಳ್ಳಲಿರುವ ಕಿನ್ನಿಮೂಲ್ಕಿ ಮಾದರಿಯಲ್ಲಿ ಕಾಮಗಾರಿ ಆರಂಭಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳೊಂದಿಗೆ ಸಂಸದರು, ಶಾಸಕರು, ಜನಪ್ರತಿನಿಧಿಗಳು ಮತ್ತು ಉಡುಪಿ ಜಿಲ್ಲಾಧಿಕಾರಿಯವರು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.
ಉಡುಪಿ – ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ವೇಳೆ ಸರ್ವೀಸ್ ರಸ್ತೆ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಿದರು.
ಕಟಪಾಡಿಯಲ್ಲಿ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಅಂಡರ್ ಮತ್ತು ಓವರ್ ಪಾಸ್ ಕಾಮಗಾರಿಯು ಮಳೆಯ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದ್ದು, ನವೆಂಬರ್ ಮೊದಲ ವಾರದಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ. ಕಾಮಗಾರಿ ವೇಳೆ ವಾಹನ ಚಾಲಕರಿಗೆ ಹಾಗೂ ಜನಸಾಮಾನ್ಯರ ಓಡಾಟಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಟಪಾಡಿ ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ತಿಳಿಸಿದರು.
ಕಟಪಾಡಿ ಗ್ರಾಮಪಂಚಾಯಿತ್ ಅಧ್ಯಕ್ಷೆ ಪ್ರಭಾ ಶೆಟ್ಟಿ, ಪಿಡಿಒ ತಿಲಕ್ ರಾಜ್, ಸದಸ್ಯರಾದ ಸುಭಾಸ್ ಬಲ್ಲಾಳ್, ಶ್ರೀನಿವಾಸ್ ಕಿಣಿ, ಪವಿತ್ರ ಶೆಟ್ಟಿ, ಪ್ರಮುಖರಾದ ಜಿತೇಂದ್ರ ಶೆಟ್ಟಿ, ಗೀತಾಂಜಲಿ ಸುವರ್ಣ, ಅಶೋಕ್ ರಾವ್, ವಿಜಯ್ ಮಾಬಿಯಾನ್ ಮತ್ತಿತರರು ಉಪಸ್ಥಿತರಿದ್ದರು.

