• Home  
  •   ಕರಾವಳಿಯ ಹವಾಮಾನದ ಕಣ್ಣಾಮುಚ್ಚಾಲೆ: ಮಳೆ ಮುನ್ಸೂಚನೆ ತಪ್ಪುವ ಹಿಂದಿನ ಅಸಲಿ ವಿಜ್ಞಾನ (Coastal weather cover-up: The real science behind missed rain forecasts)
- ವಿಷೇಶ ಸುದ್ದಿ

  ಕರಾವಳಿಯ ಹವಾಮಾನದ ಕಣ್ಣಾಮುಚ್ಚಾಲೆ: ಮಳೆ ಮುನ್ಸೂಚನೆ ತಪ್ಪುವ ಹಿಂದಿನ ಅಸಲಿ ವಿಜ್ಞಾನ (Coastal weather cover-up: The real science behind missed rain forecasts)

Share:   ಕರಾವಳಿಯ ಹವಾಮಾನದ ಕಣ್ಣಾಮುಚ್ಚಾಲೆ: ಮಳೆ ಮುನ್ಸೂಚನೆ ತಪ್ಪುವ ಹಿಂದಿನ ಅಸಲಿ ವಿಜ್ಞಾನ ಉಪಗ್ರಹಗಳಿದ್ದರೂ ಮುನ್ಸೂಚನೆ ಏಕೆ ತಪ್ಪುತ್ತದೆ?   ಬಂಟಕಲ್‌ ತಾಂತ್ರಿಕ ಕಾಲೇಜಿನ ಪಾಂಶುಪಾಲ ಡಾ. ಫ್ರೊ. ನಾಗರಾಜ ಭಟ್ ರವರ ವಿಶೇಷ ಲೇಖನ   (Udupi) ಉಡುಪಿ: ಮೇ ಕೊನೆಯ ವಾರ ಬಂತೆಂದರೆ  ಕರಾವಳಿ ಕರ್ನಾಟಕದಲ್ಲಿ ಒಂದು ಹೊಸ ಕುತೂಹಲ ಶುರುವಾಗುತ್ತದೆ. ಮೊಬೈಲ್‌ನಲ್ಲಿ ಮಳೆ ಎಚ್ಚರಿಕೆ ಬರುತ್ತದೆ. ಮೀನುಗಾರರು ಸಮುದ್ರದ ಕಡೆ ಕಣ್ಣಿಡುತ್ತಾರೆ. ರೈತರು ಹೊಲದ ಕಡೆ ನೋಡುತ್ತಾರೆ. ಜನರು ಆಕಾಶ ನೋಡುತ್ತಾರೆ.    […]

  (Udupi) ಉಡುಪಿ: ಮೇ ಕೊನೆಯ ವಾರ ಬಂತೆಂದರೆ  ಕರಾವಳಿ ಕರ್ನಾಟಕದಲ್ಲಿ ಒಂದು ಹೊಸ ಕುತೂಹಲ ಶುರುವಾಗುತ್ತದೆ. ಮೊಬೈಲ್‌ನಲ್ಲಿ ಮಳೆ ಎಚ್ಚರಿಕೆ ಬರುತ್ತದೆ. ಮೀನುಗಾರರು ಸಮುದ್ರದ ಕಡೆ ಕಣ್ಣಿಡುತ್ತಾರೆ. ರೈತರು ಹೊಲದ ಕಡೆ ನೋಡುತ್ತಾರೆ. ಜನರು ಆಕಾಶ ನೋಡುತ್ತಾರೆ.

   ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಕೂಡ ಕರಾವಳಿಯ ಜನರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವಂತೆ ಕಾಣುತ್ತಿದೆ. ಉಡುಪಿ ಜಿಲ್ಲೆಗೆ ‘ರೆಡ್ ಅಲರ್ಟ್’ ಬಂದ ದಿನ ಮಲ್ಪೆ ತೀರದಲ್ಲಿ ಬಿಸಿಲಿರುತ್ತದೆ. . ಉಡುಪಿ ನಗರದಲ್ಲಿ ರಸ್ತೆ ಒಣಗಿರುತ್ತದೆ. ಆದರೆ ಯಾವುದೇ ದೊಡ್ಡ ಎಚ್ಚರಿಕೆ ಇಲ್ಲದ ದಿನ ಕಾರ್ಕಳ, ಕೊಲ್ಲೂರು, ಹೆಬ್ರಿ ಭಾಗದಲ್ಲಿ ಆಕಾಶವೇ ಹರಿದುಬಿದ್ದಂತೆ ಮಳೆ ಸುರಿದು ಪ್ರವಾಹದ ಸ್ಥಿತಿ ಉಂಟಾಗುತ್ತದೆ.

  ಆಗ ಜನರು ಸಹಜವಾಗಿ ಕೇಳುತ್ತಾರೆ: “ಇಷ್ಟು ಉಪಗ್ರಹ, ರಾಡಾರ್, ಸೂಪರ್ ಕಂಪ್ಯೂಟರ್ ಇದ್ದರೂ ಮಳೆ ಮುನ್ಸೂಚನೆ ಏಕೆ ತಪ್ಪುತ್ತದೆ?”

   ಉತ್ತರ ಸರಳವಾದರೂ ಗಂಭೀರವಾಗಿದೆ. ಸಮಸ್ಯೆ ವಿಜ್ಞಾನಿಗಳ ನಿರ್ಲಕ್ಷ್ಯದಲ್ಲಿಲ್ಲ. ಸೂಪರ್ ಕಂಪ್ಯೂಟರ್‌ಗಳ ಶಕ್ತಿಯ ಕೊರತೆಯಲ್ಲೂ ಇಲ್ಲ. ಅಸಲಿ ಸಮಸ್ಯೆ ದತ್ತಾಂಶದ ಸೂಕ್ಷ್ಮತೆಯಲ್ಲಿ ಇದೆ.

   ಹವಾಮಾನ ವಿಜ್ಞಾನದಲ್ಲಿ ಇದನ್ನು Spatio Temporal Resolution ಎಂದು ಕರೆಯುತ್ತಾರೆ. ಸರಳ ಕನ್ನಡದಲ್ಲಿ ಹೇಳುವುದಾದರೆ, “ಎಲ್ಲಿ, ಯಾವಾಗ, ಎಷ್ಟು ಸೂಕ್ಷ್ಮವಾಗಿ ಮಾಹಿತಿ ಲಭ್ಯವಿದೆ?” ಎಂಬ ಪ್ರಶ್ನೆ. ಕರಾವಳಿ ಕರ್ನಾಟಕದ ಮಳೆಯನ್ನು ಅರ್ಥಮಾಡಿಕೊಳ್ಳಲು ಜಿಲ್ಲಾಮಟ್ಟದ ಮಾಹಿತಿ ಸಾಕಾಗುವುದಿಲ್ಲ. ಗ್ರಾಮಮಟ್ಟದ ಮಾಹಿತಿ ಬೇಕು. ದಿನಕ್ಕೆ ಎರಡು ಬಾರಿ ಮಾಹಿತಿ ಸಾಕಾಗುವುದಿಲ್ಲ. ಕೆಲವೊಮ್ಮೆ ಪ್ರತಿ 10 ನಿಮಿಷದ ಮಾಹಿತಿ ಬೇಕು.

  ಕರಾವಳಿಯ ಹವಾಮಾನ ಏಕೆ ಇಷ್ಟು ಕ್ಲಿಷ್ಟ?

  ಕರಾವಳಿ ಕರ್ನಾಟಕ ಸಾಮಾನ್ಯ ಪ್ರದೇಶವಲ್ಲ. ಒಂದು ಬದಿಯಲ್ಲಿ ಅರಬ್ಬಿ ಸಮುದ್ರ, ಮತ್ತೊಂದು ಬದಿಯಲ್ಲಿ ಪಶ್ಚಿಮ ಘಟ್ಟ. ಈ ಎರಡರ ನಡುವೆ ಕಿರಿದಾದ ಭೂಪಟ್ಟಿ. ಸಮುದ್ರದಿಂದ ಬರುವ ತೇವಭರಿತ ಗಾಳಿ ಪಶ್ಚಿಮ ಘಟ್ಟಕ್ಕೆ ಡಿಕ್ಕಿ ಹೊಡೆದಾಗ ಮೋಡಗಳು ತೀವ್ರವಾಗಿ ಬೆಳೆಯುತ್ತವೆ. ಇದನ್ನೇ Orographic Lifting ಎನ್ನುತ್ತಾರೆ.

  ಆದ್ದರಿಂದ ಮಲ್ಪೆಯಲ್ಲಿ ಬಿಸಿಲಿದ್ದರೂ ಮಣಿಪಾಲದಲ್ಲಿ ಮಳೆ ಇರಬಹುದು. ಉಡುಪಿಯಲ್ಲಿ ಒಣ ಹವಾಮಾನವಿದ್ದರೂ, ಕಾರ್ಕಳದಲ್ಲಿ ಭಾರೀ ಮಳೆಯಾಗಬಹುದು. ಕೊಲ್ಲೂರಿನಲ್ಲಿ ನದಿ ತುಂಬಬಹುದು, ಆದರೆ ಕರಾವಳಿ ತೀರದಲ್ಲಿ ಜನರು “ಮಳೆ ಬಂದೇ ಇಲ್ಲ”ಎಂದು ಹೇಳಬಹುದು. ಇದು ಮುನ್ಸೂಚನೆಯ ಅಜಾಗರೂಕತೆ ಅಲ್ಲ. ಇದು ಕರಾವಳಿಯ ಹವಾಮಾನದ ಸಂಕೀರ್ಣತೆ.

  ಪಶ್ಚಿಮ ಘಟ್ಟ: ಮಳೆಯ ನೈಸರ್ಗಿಕ ಯಂತ್ರ

   ಪಶ್ಚಿಮ ಘಟ್ಟಗಳು ಕೇವಲ ಬೆಟ್ಟಗಳಲ್ಲ. ಅವು ಕರಾವಳಿಯ ಮಳೆ ನಿರ್ಮಿಸುವ ನೈಸರ್ಗಿಕ ಯಂತ್ರ. ಕಾಡುಗಳು ತೇವಾಂಶವನ್ನು ಹಿಡಿದಿಡುತ್ತವೆ. ಮರಗಳು ವಾತಾವರಣಕ್ಕೆ ತೇವವನ್ನು ಮರಳಿ ಕಳುಹಿಸುತ್ತವೆ. ಮಣ್ಣು ನೀರನ್ನು ಸಂಗ್ರಹಿಸುತ್ತದೆ. ಆದರೆ ಅರಣ್ಯನಾಶ, ಬೆಟ್ಟಗಳ ಕಟಾವು, ಅನಿಯಂತ್ರಿತ ರಸ್ತೆ ನಿರ್ಮಾಣ, ಕಾಂಕ್ರೀಟ್ ವಿಸ್ತರಣೆ, ನೈಸರ್ಗಿಕ ಕಾಲುವೆಗಳ ನಾಶ ಇವೆಲ್ಲವು ಈ ಸೂಕ್ಷ್ಮ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆ.

   ಮರ ಕಡಿದರೆ ಕೇವಲ ನೆರಳು ಕಡಿಮೆಯಾಗುವುದಿಲ್ಲ. ಸ್ಥಳೀಯ ಹವಾಮಾನವೇ ಬದಲಾಗುತ್ತದೆ. ಮೊದಲು ಎರಡು ದಿನ ಸುರಿಯುತ್ತಿದ್ದ ಮಳೆ ಈಗ ಎರಡು ಗಂಟೆಗಳಲ್ಲಿ ಸುರಿಯುತ್ತದೆ. ಪರಿಣಾಮ: ಪ್ರವಾಹ, ಭೂಕುಸಿತ, ಕಡಲಕೊರೆತ ಮತ್ತು ಕೃಷಿ ಹಾನಿ.

  ದೂರದ ಪೆಸಿಫಿಕ್, ನಮ್ಮ ಉಡುಪಿಯ ಮಳೆ!

   ಕರಾವಳಿಯ ಮಳೆ ಕೇವಲ ಸ್ಥಳೀಯ ಮೋಡಗಳಿಂದ ನಿರ್ಧಾರವಾಗುವುದಿಲ್ಲ. ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರವೂ ನಮ್ಮ ಮುಂಗಾರನ್ನು ಪ್ರಭಾವಿಸುತ್ತದೆ. ಇದನ್ನೇ Weather Teleconnection ಎನ್ನುತ್ತಾರೆ. ಪೆಸಿಫಿಕ್ ಸಾಗರದ ನೀರು ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾದರೆ ಅದನ್ನು ಎಲ್ ನಿನೊ ಎನ್ನುತ್ತಾರೆ. ಆಗ ಭಾರತದ ಮುಂಗಾರು ಕೆಲವೊಮ್ಮೆ ದುರ್ಬಲಗೊಳ್ಳುತ್ತದೆ. ಅದೇ ನೀರು ಸಾಮಾನ್ಯಕ್ಕಿಂತ ಹೆಚ್ಚು ತಂಪಾದರೆ ಅದನ್ನು ಲಾ ನಿನಾ ಎನ್ನುತ್ತಾರೆ. ಇದು ಅನೇಕ ಬಾರಿ ಮುಂಗಾರಿಗೆ ಬಲ ನೀಡುತ್ತದೆ. ಆದರೆ ಪರಿಣಾಮ ಎಲ್ಲೆಡೆ ಒಂದೇ ಆಗುವುದಿಲ್ಲ. ಕೆಲವು ಕಡೆ ಉತ್ತಮ ಮಳೆ, ಕೆಲವು ಕಡೆ ಅತಿವೃಷ್ಟಿ. ಇದರ ಜೊತೆಗೆ ಹಿಂದೂ ಮಹಾಸಾಗರದ Indian Ocean Dipole ಕೂಡ ಕರಾವಳಿ ಮಳೆಗೆ ಪ್ರಭಾವ ಬೀರುತ್ತದೆ. ಅಂದರೆ, ಪೆಸಿಫಿಕ್ ಸಾಗರದ ಒಂದು ಡಿಗ್ರಿ ತಾಪಮಾನ ವ್ಯತ್ಯಾಸ ಉಡುಪಿಯ ರೈತನ ಬಿತ್ತನೆಯ ನಿರ್ಧಾರವನ್ನೇ ಬದಲಿಸಬಹುದು!

ಅಸಲಿ ಸಮಸ್ಯೆ: ಮಸುಕಾದ ಕನ್ನಡಕ

  ನಾವು ಮಂಜಿನ ನಡುವೆ ನಿಂತು ಮಸುಕಾದ ಕನ್ನಡಕದಿಂದ ದೂರದ ವಸ್ತುವನ್ನು ನೋಡಲು ಪ್ರಯತ್ನಿಸಿದರೆ ವಸ್ತು ಸ್ಪಷ್ಟವಾಗಿ ಕಾಣುವುದಿಲ್ಲ. ಅದು ಕಣ್ಣಿನ ದೋಷವಲ್ಲ. ಕನ್ನಡಕದ ದೋಷ, ಹವಾಮಾನ ಮುನ್ಸೂಚನೆಯಲ್ಲೂ ಇದೇ ಸ್ಥಿತಿ. ಹವಾಮಾನ ಮಾದರಿಗಳು ಹಲವುವೇಳೆ 10 ರಿಂದ 25 ಕಿ.ಮೀ. ಚೌರಾಸಿನ್ನಲ್ಲಿ ಅಳೆಯಲಾಗುತ್ತದೆ. ಅಂದರೆ ಮಲ್ಪೆ, ಉಡುಪಿ, ಮಣಿಪಾಲ, ಕಾರ್ಕಳಗಳ ಹವಾಮಾನದ ಅಂಕಿ ಅಂಶಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸಲಾಗುತ್ತಿದೆ. ಆದರೆ ಕರಾವಳಿಯಲ್ಲಿ ಮಳೆ 5ಕಿ.ಮೀ. ಅಂತರದಲ್ಲೇ ಬದಲಾಗಬಹುದು. ಒಂದು ಕಡೆ ಭಾರೀ ಮಳೆ, ಮತ್ತೊಂದು ಕಡೆ ಬಿಸಿಲು.

   ಇದಕ್ಕೆ ಜೊತೆಗೆ ಕಾಲದ ಸಮಸ್ಯೆಯೂ ಇದೆ. ಘಟ್ಟ ಪ್ರದೇಶದಲ್ಲಿ ತೀವ್ರ ಮಳೆ ತರುವ ಮೋಡಗಳು 1 ರಿಂದ 3 ಗಂಟೆಗಳಲ್ಲಿ ಬೆಳೆಯಬಹುದು, ಮಳೆ ಸುರಿಸಬಹುದು ಮತ್ತು ಮಾಯವಾಗಬಹುದು. ಮಾದರಿ ಹೊಸ ಮುನ್ಸೂಚನೆ ನೀಡುವಷ್ಟರಲ್ಲಿ ಆ ಮಳೆ ಘಟನೆ ಮುಗಿದಿರಬಹುದು. ಆದ್ದರಿಂದ ಪ್ರಶ್ನೆ “ಮಾಡೆಲ್ ಏಕೆ ತಪ್ಪಿತು?” ಎಂಬುದಲ್ಲ. ಪ್ರಶ್ನೆ “ಮಾಡಿ ಸಾಕಷ್ಟು ಸೂಕ್ಷ್ಮ ದತ್ತಾಂಶ ಸಿಕ್ಕಿತೇ?” ಎಂಬುದು.

   ಉಪಗ್ರಹಗಳು ಸಾಕಾಗುವುದಿಲ್ಲವೇ?

  ಉಪಗ್ರಹಗಳು ಅಗತ್ಯ. ಅವು ಮೋಡ, ತೇವಾಂಶ, ಸಮುದ್ರದ ಉಷ್ಣತೆ, ಗಾಳಿ ಮತ್ತು ಮಳೆಯ ಅಂದಾಜುಗಳನ್ನು ನೀಡುತ್ತವೆ. ಆದರೆ ಉಪಗ್ರಹ ಒಂದೇ ಸಾಕಾಗುವುದಿಲ್ಲ. ಮೋಡದ ಮೇಲ್ಮಾಗ ಕಾಣುವುದು ಒಂದು ಮಾಹಿತಿ. ಆದರೆ ಮೋಡದ ಒಳಗೆ ಎಷ್ಟು ನೀರಿದೆ? ಗಾಳಿ ಯಾವ ದಿಕ್ಕಿಗೆ ತಳ್ಳುತ್ತಿದೆ? ನೆಲದಲ್ಲಿ ಮಣ್ಣಿನ ತೇವ ಎಷ್ಟು? ನದಿ ಈಗಾಗಲೇ ತುಂಬಿದೆಯೇ? ಈ ಪ್ರಶ್ನೆಗಳಿಗೆ ನೆಲಮಟ್ಟದ ದತ್ತಾಂಶ ಬೇಕು. ಉಪಗ್ರಹ, ಡಾಪ್ಟರ್ ರಾಡಾರ್, ಸ್ವಯಂಚಾಲಿತ ಹವಾಮಾನ ಕೇಂದ್ರ, ನದಿ ಮಟ್ಟ ಸೆನ್ಸಾರ್, ಮಣ್ಣಿನ ತೇವಾಂಶ ಸೆನ್ಸಾರ್ ಮತ್ತು AI ಇವೆಲ್ಲ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಕರಾವಳಿಗೆ ನಿಖರ ಮುನ್ಸೂಚನೆ ಸಾಧ್ಯ.

   ನನ್ನ ಸಂಶೋಧನೆಯ ಪಾಠ

   ಹವಾಮಾನ ಮಾಹಿತಿ ವಿಜ್ಞಾನ, ಉಪಗ್ರಹ ದತ್ತಾಂಶ, ರಿಮೋಟ್ ಸೆನ್ಸಿಂಗ್, GIS ಮತ್ತು AI ಆಧಾರಿತ ಹವಾಮಾನ ಮಾದರಿಗಳೊಂದಿಗೆ ಕೆಲಸ ಮಾಡುವಾಗ ನಾನು ಕಂಡ ಪ್ರಮುಖ ಪಾಠ ಇದು: ಭವಿಷ್ಯದ ಹವಾಮಾನ Artificial Intelligence , Local Intelligence & Artificial Intelligence. AI ಶಕ್ತಿಶಾಲಿ. ಆದರೆ ಅದು ಕಲಿಯಲು ಸ್ಥಳೀಯ ದತ್ತಾಂಶ ಬೇಕು. ಉಡುಪಿಯ ಮಳೆ, ಕಾರ್ಕಳದ ಘಟ್ಟ, ಮಲ್ಪೆಯ ಸಮುದ್ರ ಗಾಳಿ, ಕೊಲ್ಲೂರಿನ ಕಾಡು, ಹೆಬ್ರಿಯ ಕಣಿವೆ, ಸಿದ್ಧಾಪುರದ ನದಿ ಹರಿವು. ಇವೆಲ್ಲವನ್ನು ತಿಳಿಯದೆ AI ಕೂಡ ಊಹೆ ಮಾಡುತ್ತದೆ, ಅಳೆಯುವುದಿಲ್ಲ.

   ಪರಿಹಾರ ಏನು?

    ಕರಾವಳಿ ಕರ್ನಾಟಕಕ್ಕೆ ಜಿಲ್ಲಾಮಟ್ಟದ ಸಾಮಾನ್ಯ ಮುನ್ಸೂಚನೆ ಸಾಕಾಗುವುದಿಲ್ಲ. ನಮಗೆ ಗ್ರಾಮ ಮಟ್ಟದ ಹವಾಮಾನ ರಕ್ಷಣಾ ವ್ಯವಸ್ಥೆ ಬೇಕು. ಪ್ರತಿ ತಾಲೂಕು, ಹೋಬಳಿ, ಘಟ್ಟದ ತಪ್ಪಲು, ಮೀನುಗಾರಿಕಾ ಬಂದರು, ಶಾಲೆ, ಕಾಲೇಜು, ಕೃಷಿ ಪ್ರದೇಶಗಳಲ್ಲಿ ಕಡಿಮೆ ವೆಚ್ಚದ ಸ್ವಯಂಚಾಲಿತ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಬೇಕು. ಇವು ಪ್ರತಿ 5 ಅಥವಾ 10 ನಿಮಿಷಕ್ಕೊಮ್ಮೆ ಮಳೆ, ಗಾಳಿ, ತಾಪಮಾನ, ತೇವಾಂಶ, ಒತ್ತಡ, ಸೌರ ವಿಕಿರಣ ಮತ್ತು ಮಣ್ಣಿನ ತೇವಾಂಶದ ಮಾಹಿತಿ ನೀಡಬೇಕು. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಿಶೇಷ ಹವಾಮಾನ ಮತ್ತು ಭೂಕುಸಿತ ವೀಕ್ಷಣಾ ಕೇಂದ್ರಗಳು ಬೇಕು. ಡಾಪ್ಟರ್ ರಾಡಾರ್ ವ್ಯಾಪ್ತಿ ಹೆಚ್ಚಬೇಕು. ಕರಾವಳಿಗೆ 1 ರಿಂದ 2 ಕಿ.ಮೀ. ಮಟ್ಟದ ಹೈ ರೆಸಲ್ಯೂಶನ್ ಸ್ಥಳೀಯ ಮಾದರಿ ಅಭಿವೃದ್ಧಿಯಾಗಬೇಕು. ಇದರ ಜೊತೆಗೆ AI ಆಧಾರಿತ Nowcasting ವ್ಯವಸ್ಥೆ ಬೇಕು. ಅಂದರೆ ಮುಂದಿನ 1 ಗಂಟೆ, 3 ಗಂಟೆ, 6 ಗಂಟೆಗಳಲ್ಲಿ ಯಾವ ಪ್ರದೇಶಕ್ಕೆ ತೀವ್ರ ಮಳೆ ಬರುವ ಸಾಧ್ಯತೆ ಇದೆ ಎಂಬ ತುರ್ತು ಮುನ್ಸೂಚನೆ.

    ಹವಾಮಾನ ಮಾಹಿತಿ ಜನರ ಕೈಗೆ ಬರಲಿ

   ಹವಾಮಾನ ಮಾಹಿತಿ ಕೇವಲ ವಿಜ್ಞಾನಿಗಳ ಪ್ರಯೋಗಾಲಯದಲ್ಲಿ ಇರಬಾರದು. ಅದು ಜನರ ಕೈಯಲ್ಲಿ ಇರಬೇಕು.

ಮೀನುಗಾರರಿಗೆ ಸಮುದ್ರಕ್ಕೆ ಹೋಗುವ ಮೊದಲು ಸ್ಥಳೀಯ ಎಚ್ಚರಿಕೆ ಸಿಗಬೇಕು. ರೈತನಿಗೆ ಬಿತ್ತನೆಗೆ ಸೂಕ್ತ ಸಮಯ ತಿಳಿಯಬೇಕು. ಶಾಲೆಗಳಿಗೆ ಸುರಕ್ಷತಾ ಮಾಹಿತಿ ಸಿಗಬೇಕು. ಪಂಚಾಯತ್‌ಗಳಿಗೆ ಯಾವ ಕಾಲುವೆ, ಯಾವ ಸೇತುವೆ, ಯಾವ ರಸ್ತೆ ಅಪಾಯದಲ್ಲಿದೆ ಎಂಬುದು ತಿಳಿಯಬೇಕು.

 ಭವಿಷ್ಯದ ಮುನ್ಸೂಚನೆ “ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ”ಎನ್ನುವುದಲ್ಲ.

ಭವಿಷ್ಯದ ಮುನ್ಸೂಚನೆ ಹೀಗಿರಬೇಕು:

  “ಮುಂದಿನ 90 ನಿಮಿಷಗಳಲ್ಲಿ ಕಾರ್ಕಳ ಮತ್ತು ಹೆಬ್ರಿ ಭಾಗದಲ್ಲಿ ತೀವ್ರ ಮಳೆಯ ಸಾಧ್ಯತೆ. ನದಿ ತೀರದ ಗ್ರಾಮಗಳು ಎಚ್ಚರಿಕೆಯಿಂದಿರಿ.”

ಇದೇ ನಿಜವಾದ ಹವಾಮಾನ ಸೇವೆ.

   ಕರಾವಳಿ ಭಾರತದ ಹವಾಮಾನ ಪ್ರಯೋಗಾಲಯವಾಗಬಹುದು

   ಕರಾವಳಿ ಕರ್ನಾಟಕದಲ್ಲಿ 100 ರಿಂದ 200 ಕಡಿಮೆ ವೆಚ್ಚದ ಮೈಕ್ರೋ ಹವಾಮಾನ ಕೇಂದ್ರಗಳು ಸ್ಥಾಪನೆಯಾದರೆ, ಇದು ದೇಶದ ಅತ್ಯುತ್ತಮ ಸ್ಥಳೀಯ ಹವಾಮಾನ ವೀಕ್ಷಣಾ ಜಾಲವಾಗಬಹುದು. ಪ್ರತಿ ಶಾಲೆ ಒಂದು ಹವಾಮಾನ ಕೇಂದ್ರವಾಗಬಹುದು. ಪ್ರತಿ ಕಾಲೇಜು ಒಂದು ದತ್ತಾಂಶ ಕೇಂದ್ರವಾಗಬಹುದು. ಪ್ರತಿ ಪಂಚಾಯತ್ ಒಂದು ಎಚ್ಚರಿಕೆ ಕೇಂದ್ರವಾಗಬಹುದು. ವಿದ್ಯಾರ್ಥಿಗಳು ನಾಗರಿಕ ವಿಜ್ಞಾನಿಗಳಾಗಬಹುದು. ಇದು ಕೇವಲ ವೈಜ್ಞಾನಿಕ ಯೋಜನೆ ಅಲ್ಲ. ಇದು ಕರಾವಳಿಯ ಸುರಕ್ಷತಾ ಚಳವಳಿ.

  ಕೊನೆಯ ಮಾತು

   ಮಳೆ ಮುನ್ಸೂಚನೆ ತಪ್ಪಿದಾಗ ನಾವು ವಿಜ್ಞಾನಕ್ಕೆ  ನಗುತ್ತೇವೆ. ಆದರೆ ಸತ್ಯ ಏನೆಂದರೆ, ವಿಜ್ಞಾನ ವಿಫಲವಾಗಿಲ್ಲ. ವಿಜ್ಞಾನಕ್ಕೆ ಬೇಕಾದಷ್ಟು ಸೂಕ್ಷ್ಮ ದತ್ತಾಂಶ ಇನ್ನೂ ಸಿಕ್ಕಿಲ್ಲ. ಉಪಗ್ರಹಗಳು ಆಕಾಶವನ್ನು ನೋಡುತ್ತವೆ. ರಾಡಾರ್ ಗಳು ಮೋಡದ ಒಳಗೆ ನೋಡುತ್ತವೆ. ಹವಾಮಾನ ಕೇಂದ್ರಗಳು ಭೂಮಿಯ ಸ್ಪಂದನವನ್ನು ಅಳೆಯುತ್ತವೆ. AI ಅವುಗಳ ನಡುವೆ ಸಂಬಂಧ ಹುಡುಕುತ್ತದೆ. ಈ ನಾಲ್ಕೂ ಒಂದಾಗಿ, ಕರಾವಳಿಯ ಸ್ಥಳೀಯ ಭೌಗೋಳಿಕತೆಯೊಂದಿಗೆ ಕೆಲಸ ಮಾಡಿದಾಗ ಮಾತ್ರ ನಿಖರ ಮುನ್ಸೂಚನೆ ಸಾಧ್ಯ. ಮಳೆಯ ಮುನ್ಸೂಚನೆ ವ್ಯವಸ್ಥೆಯಲ್ಲಿ ದೋಷವಿಲ್ಲ ಆದರೆ ಮಳೆಯನ್ನು ಅಳೆಯುವ ಕಣ್ಣು ಇನ್ನೂ ಸಾಕಷ್ಟು ಸೂಕ್ಷ್ಮವಾಗಿಲ್ಲ. ಆ ಕಣ್ಣನ್ನು ನಿರ್ಮಿಸುವುದು ನಮ್ಮ ಮುಂದಿನ ದೊಡ್ಡ ಜವಾಬ್ದಾರಿ.

   ಸ್ಥಳೀಯ ದತ್ತಾಂಶ. ಸ್ಥಳೀಯ ವಿಜ್ಞಾನ, ಸ್ಥಳೀಯ ಮುನ್ಸೂಚನೆ. ಸ್ಥಳೀಯ ರಕ್ಷಣೆ. ಇದೇ ಕರಾವಳಿಯ ಭವಿಷ್ಯದ ಹವಾಮಾನ ಮಂತ್ರ.

ಡಾ. ನಾಗರಾಜ ಭಟ್ ರವರು ಉಡುಪಿಯ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್.

Leave a comment

Your email address will not be published. Required fields are marked *

eMedia Kannada  @2025. All Rights Reserved.