ಕಾಪು ಪುರಸಭಾ ಸಿಬ್ಬಂದಿಯ ಅಚಾತುರ್ಯ : ಕಛೇರಿಯಲ್ಲಿ ಪ್ರಾಧಿಕಾರದ ಸಿಬ್ಬಂದಿಗಳ ದಿಗ್ಬಂಧನ
ಪುರಸಭೆ ಮತ್ತು ಪ್ರಾಧಿಕಾರಕ್ಕೆ ತೆರಳಲು ಒಂದೇ ದ್ವಾರದ ಅವಾಂತರ
(Kaup) ಕಾಪು: ಕಾಪು ಪುರಸಭೆಯ ಸಿಬ್ಬಂದಿಯ ಅಚಾತುರ್ಯದಿಂದಾಗಿ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿಯೊಳಗೆ ದಿಗ್ಬಂಧನ ಒಳಗಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕಾಪು ಪುರಸಭಾ ಸಂಕೀರ್ಣದಲ್ಲಿ ಕಾಪು ಯೋಜನಾ ಪ್ರಾಧಿಕಾರದ ಕಚೇರಿಯು ಮೇಲಿನ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎರಡೂ ಕಚೇರಿಗಳಿಗೆ ತೆರಳಲು ಒಂದೇ ದ್ವಾರ ಇದೆ. ಸಾಮಾನ್ಯವಾಗಿ ಪುರಸಭೆ ಸಿಬ್ಬಂದಿಗಳು ಸಂಜೆ 5:30 ರಿಂದ 6 ಗಂಟೆಯ ಒಳಗೆ ಬೀಗ ಹಾಕಿ ತೆರಳುತ್ತಾರೆ. ಪ್ರಾಧಿಕಾರದ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರೆ, ಅವರಿಗೆ ಮಾಹಿತಿ ನೀಡಿ, ಪುರಸಭಾ ಕಚೇರಿಯ ಬಾಗಿಲು ಹಾಕುವ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು.
ಆದರೆ ಮಂಗಳವಾರ ಪ್ರತಿದಿನ ಬೀಗ ಹಾಕುವ ಸಿಬ್ಬಂದಿ ಅನಾರೋಗ್ಯದ ಕಾರಣದಿಂದಾಗಿ ಬೇಗನೆ ಮನೆಗೆ ತೆರಳಿದ್ದರು. ಅವರ ಬದಲಿಗೆ ಬೀಗ ಹಾಕಬೇಕಿದ್ದ ಸಿಬ್ಬಂದಿ ಪ್ರಥಮ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಧಿಕಾರದ ಸಿಬ್ಬಂದಿಗಳ ಬಗ್ಗೆ ಗಮನಕೊಡದೆ ಸೀದಾ ಬಾಗಿಲು ಹಾಕಿ ನಿರ್ಗಮಿಸಿದ್ದರು.
ಪ್ರಾಧಿಕಾರದ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ತಮ್ಮ ಕೆಲಸ ಮುಗಿಸಿ ವಾಪಸ್ ಆಗುವ ವೇಳೆ ಮುಖ್ಯ ದ್ವಾರಕ್ಕೆ ಬೀಗ ಹಾಕಿರುವುದು ಗಮನಕ್ಕೆ ಬಂದಿದೆ. ಕಛೇರಿಯ ಒಳಗಿದ್ದವರು ಕೆಲಕಾಲ ಕ್ಷಣಕಾಲ ಗೊಂದಲಕಕೆ ಒಳಗಾಗಿದ್ದು, ಕೆಲವರು ಆತಂಕಕ್ಕೆ ಒಳಗಾಗಿ ಪೋಲಿಸ್ ಇಲಾಖೆಗೂ ಮಾಹಿತಿ ನೀಡಿದ್ದರು.
ವಿಷಯ ತಿಳಿದ ಪುರಸಭೆಯ ಮುಖ್ಯಾಧಿಕಾರಿಯವರು, ಬೀಗ ಹಾಕಿ ತೆರಳಿದ್ದ ಸಿಬ್ಬಂದಿಯನ್ನು ಕಳುಹಿಸಿ ಬಾಗಿಲು ತೆಗೆಸಿಕೊಡುವ ವ್ಯವಸ್ಥೆ ಮಾಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

