ಕಾಪು ಶ್ರೀ ಹೊಸ ಮಾರಿಗುಡಿ: ನವದುರ್ಗಾ ಲೇಖನ ಸಂಕಲ್ಪ ಸ್ವೀಕಾರಕ್ಕೆ ಚಾಲನೆ

(Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿರುವ ನವದುರ್ಗಾ ಲೇಖನ ಸಂಕಲ್ಪ ಸ್ವೀಕಾರಕ್ಕೆ ಚಾಲನೆ ನೀಡಲಾಯಿತು.
ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್, ರತಿ ಶೆಟ್ಟಿ ಉಡುಪಿ, ಕಲ್ಪನಾ ಭಾಸ್ಕರ್, ವಿದ್ಯಾ ಎಸ್. ಶೆಟ್ಟಿ, ಸುಕಲತಾ ಸುಧಾಕರ್ ಶೆಟ್ಟಿ, ಡಾ. ಸುನೀತಾ ಶೆಟ್ಟಿ ಬ್ರಹ್ಮಾವರ, ನಯನಾ ಗಣೇಶ್, ಸರಳ ಎಸ್. ಹೆಗ್ಡೆ ನವದುರ್ಗಾ ಲೇಖನ ಸಂಕಲ್ಪದ ದೀಪ ಪ್ರಜ್ವಲನೆಗೈದರು.
ಕ್ಷೇತ್ರದ ತಂತ್ರಿಗಳಾದ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿಗಳ ಉಪಸ್ಥಿತಿಯಲ್ಲಿ ಮಂಗಳ ಗೌರಿ ಪೂಜೆಯೊಂದಿಗೆ ನವದುರ್ಗಾ ಲೇಖನ ಸಂಕಲ್ಪ ಸ್ವೀಕರಿಸಿದರು.
ಸಮಿತಿ ಉದ್ಘಾಟನೆ : ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್, ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಬಾಲಾಜಿ, ಕಾರ್ಯಾಧ್ಯಕ್ಷರಾದ ಕೃಷ್ಣಪ್ರಸಾದ್ ಅಡ್ಯಂತಾಯ, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಉಪಾಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್, ಡಾ. ವಿದ್ಯಾ ಶಂಕರ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ, ಕೋಶಾಧಿಕಾರಿ ಕೆ. ವಿಶ್ವನಾಥ್ ನೇತೃತ್ವದ ತಂಡವನ್ನು ಘೋಷಿಸಿ, ಉದ್ಘಾಟಿಸಲಾಯಿತು.
ಕೆ. ರಘುಪತಿ ಭಟ್ ಮಾತನಾಡಿ, ಕನಿಷ್ಠ 99,999 ಲೇಖನ ಯಜ್ಞ ಸಂಕಲ್ಪ ಗುರಿ ಹೊಂದಲಾಗಿದೆ. ನವದುರ್ಗಾ ಲೇಖನ ಯಜ್ಞ ಪುಸ್ತಕ ಪಡೆಯಲು ಭಕ್ತರು ರೂ. 199 ಪಾವತಿಸಿ ಹೆಸರು ನೋಂದಾಯಿಸಲು ಅ.28ರವರೆಗೆ ಅವಕಾಶವಿದೆ. 29ರಂದು ಶ್ರೀ ವಾಗೀಶ್ವರೀ ಪೂಜೆಯೊಂದಿಗೆ ನವದುರ್ಗಾ ಲೇಖನ ಯಜ್ಞದ ಪುಸ್ತಕ ಬಿಡುಗಡೆಗೊಳಿಸಲಾಗುವುದು.
29ರ ನಂತರ 45 ದಿನದ ಒಳಗೆ ಪುಸ್ತಕವನ್ನು ಬರೆದು ಸಾನಿಧ್ಯಕ್ಕೆ ತಲುಪಿಸಬೇಕು. 2025ರ ಫೆ.4 ರಂದು ಮಾರಿಯಮ್ಮ ಸನ್ನಿಧಿಯಲ್ಲಿ ಚಂಡಿಕಾ ಯಾಗ ಸಂಪನ್ನಗೊಳ್ಳಲಿದೆ. ದೇಶ ವಿದೇಶದಲ್ಲಿರುವ ಭಕ್ತರೂ ಕೂಡಾ ಆನ್ಲೈನ್ ಮೂಲಕ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಮಾಹಿತಿಯನ್ನು ಶ್ರೀ ಹೊಸಮಾರಿಗುಡಿ ವೆಬ್ಸೈಟ್ನಲ್ಲಿ ಲಭ್ಯವಿದೆ ಎಂದು ವಿವರಿಸಿದರು.
ನವದುರ್ಗಾ ಲೇಖನ ಸಂಕಲ್ಪ ಸ್ವೀಕಾರ ಹಾಗೂ ಸಮಿತಿಯ ಉದ್ಘಾಟನಾ ಸಮಾರಂಭದ ಧಾರ್ಮಿಕ ಕಾರ್ಯಕ್ರಮವನ್ನು ಗೌರಿಗದ್ದೆ ವಿನಯಗುರೂಜಿ ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ದೇವರನ್ನು ಪೂಜೆ ಮಾಡಬೇಕಾದರೆ ದೇವರ ಮಹಿಮೆ, ವಿಗ್ರಹ, ದೇವಸ್ಥಾನದ ಬಗ್ಗೆ ತಿಳಿದುಕೊಂಡು ಹೋದಾಗ ಶ್ರದ್ಧೆ ಇನ್ನೂ ಜಾಸ್ತಿಯಾಗುತ್ತದೆ. ನಮ್ಮ ಆರಾಧನಾ ಪರಂಪರೆಗಳೆಲ್ಲವೂ ಪ್ರಕೃತಿಗೆ ಗೌರವ ಕೊಡುವ ಆರಾಧನೆಗಳಾಗಿವೆ ಎಂದು ಗೌರಿಗದ್ದೆ ವಿನಯಗುರೂಜಿ ಅಭಿಪ್ರಾಯಪಟ್ಟರು.
ನವದುರ್ಗೆಯರ ಉಪಾಸನೆಯಿಂದ ಮನಃಶಾಂತಿ ಹಾಗೂ ಅನುಗ್ರಹ ಪ್ರಾಪ್ತಿಯಾಗುತ್ತದೆ. ಬ್ರಹ್ಮತೇಜಸ್ಸು, ಮಂತ್ರಶಕ್ತಿ, ತಪಸ್ಸು ಈ ಮೂರನ್ನು ಮನುಷ್ಯ ತಿಳಿದುಕೊಂಡಾಗ ಪೂರ್ಣವಾಗುತ್ತಾನೆ ಎಂದು ನುಡಿದ ಅವರು, ತಾವು ಹಾಗೂ ಭಕ್ತರ ಕಡೆಯಿಂದ ಇಲ್ಲಿನ ದೇಗುಲಕ್ಕೆ ಚಿನ್ನ ಹಾಗೂ ಬೆಳ್ಳಿಯನ್ನು ಸಮರ್ಪಣೆಯನ್ನು ಮಾಡುವುದಾಗಿ ವಿನಯ ಗುರೂಜಿ ಭರವಸೆ ನೀಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, 200 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದ ರಥವನ್ನೆಳೆಯುವ ಕೆಲಸವನ್ನೂ ಎಲ್ಲರೂ ಅನೂಚಾನವಾಗಿ ಮಾಡಿದ್ದಾರೆ. ಭಕ್ತರು ದೇವಿಯ ಅಭೀಷ್ಟೆಯಂತೆ ಸೇವೆಯಲ್ಲಿ ಭಾಗಿಗಳಾಗಿ ಎಂದು ಕರೆ ನೀಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಿ. ಶಂಕರ್, ಮೂಡಬಿದ್ರಿ ಆಳ್ವಾಸ್ ಫೌಂಡೇಶನ್ನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಆಂಧ್ರಪ್ರದೇಶದ ಕಲ್ಯಾಣ ದುರ್ಗಾ ಶಾಸಕ ಅಮಿಲಿನೆನಿ ಸುರೇಂದ್ರ ಬಾಬು, ಶಾಸಕರಾದ ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್., ಮಹೇಶ್ ವಿಕ್ರಮ್ ಹೆಗ್ಡೆ, ಎರ್ಮಾಳು ಚಂದ್ರಹಾಸ ಶೆಟ್ಟಿ ಪೂನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಮನೋಹರ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ದಾಮೋದರ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಬಾಲಾಜಿ ವಂದಿಸಿದರು.
