ಕಾಪು: ಸೇನೆಯಿಂದ ನಿವೃತ್ತಿಗೊಂಡ ಯೋಧನಿಗೆ ಮಾಜಿ ಶಾಸಕರು, ಊರಿನ ಪ್ರಮುಖರಿಂದ ಭವ್ಯ ಸ್ವಾಗತ
(Kaup) ಕಾಪು : ಸುಮಾರು 24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಹುಟ್ಟೂರು ಕಾಪುವಿನ ಕೊಪ್ಪಲಂಗಡಿ ಸಮೀಪದ ರಾಮನಗರಕ್ಕೆ ಆಗಮಿಸುತ್ತಿದ್ದ ಎಸಿಪಿ ನಾಯ್ಕ್ ಸುಬೇದಾರ್ ದೇವದಾಸ್ ಮೆಂಡನ್‌ರವರನ್ನು ಭಾನುವಾರ ಬೆಳಿಗ್ಗೆ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್‌ರವರು ಮತ್ತು ಊರಿನ ಪ್ರಮುಖರು ಆದರದಿಂದ ಸ್ವಾಗತಿಸಿದರು.
ದೇವದಾಸ್ ಮೆಂಡನ್‌ರವರನ್ನು ಅಭಿನಂದಿಸಿ, ಮೆರವಣಿಗೆಯ ಮೂಲಕ ಅವರ ಮನೆ ತನಕ ಕರೆ ತರಲಾಯಿತು.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಎಸಿಪಿ ನಾಯ್ಕ್ ಸುಬೇದಾರ್ ದೇವದಾಸ್ ಮೆಂಡನ್, ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತೇನೆ. ಭಾರತ ಚೀನಾ ನಡುವಿನ ಗಲ್ವಾನ್ ಘರ್ಷಣೆ, ಜಮ್ಮುಕಾಶ್ಮೀರದಲ್ಲಿ ಕಷ್ಟಕರ ಸನ್ನಿವೇಶದಲ್ಲೂ ದೇಶ ಸೇವೆ ಮಾಡಿದ್ದೇನೆ. ಅಪಾಯ ಎಲ್ಲಾ ಕೆಲಸಗಳಲ್ಲೂ ಇದೆ. ದೇಶ ಸೇವೆಯು ಮಹತ್ತರವಾದ ಕಾರ್ಯವಾಗಿದೆ. ಯುವ ಜನರು ಸೈನ್ಯ ಸೇರಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ದೇಶಕ್ಕೆ ಭದ್ರತೆ ನೀಡಿ ನಾವೆಲ್ಲರು ಸುಖಿಗಳಾಗಿರಲು ಸೈನಿಕರ ಕೊಡುಗೆಯಿದೆ. ಮುಂದೆ ಊರಿನ ಸಂಘ ಸಂಸ್ಥೆಗಳ ಮೂಲಕ ಅವರ ಸೇವೆ ನಮಗೆ ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್, ಕಾಪು ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಮಾಜಿ ಯೋಧರಾದ ಕುಶ ಸಾಲ್ಯಾನ್, ಶ್ರೀಕಾಂತ್, ಮೊಗವೀರ ಸಂಘ, ಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.

