ಕೆಎಸ್ಆರ್ಟಿಸಿ ಸಾರಿಗೆ ವಾಹನಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಲು ಆಗ್ರಹ
ಸಾರಿಗೆ ನಿಯಂತ್ರಣಾಧಿಕಾರಿಯವರಿಗೆ ಪ. ಜಾತಿ–ಪ. ಪಂಗಡ ಸಂಘದ ಅಧ್ಯಕ್ಷ ಚಂದ್ರಶೇಖರ್ ಪರಶುರಾಮ್ ರಿಂದ ಮನವಿ
(Haveri) ಹಾವೇರಿ : ಕೆಎಸ್ಆರ್ಟಿಸಿ ಸಾರಿಗೆ ವಾಹನಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸುವಂತೆ ಆಗ್ರಹಿಸಿ ಕೆಎಸ್ಆರ್ಟಿಸಿ ಹಾವೇರಿ ರಸ್ತೆ ಸಾರಿಗೆ ವಿಭಾಗದ ಅಧಿಕಾರಿ ಜಿ. ವಿಜಯ್ ಕುಮಾರ್ ರವರಿಗೆ ಹಾವೇರಿ ಜಿಲ್ಲಾ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡ ಸಂಘದ ವತಿಯಿಂದ ಹಾಗೂ ಅಧ್ಯಕ್ಷರಾದ ಚಂದ್ರಶೇಖರ್ ಪರಶುರಾಮ್ ಗದಗಕರ ಅವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ, ವಿಶೇಷವಾಗಿ ವೃದ್ಧರು, ಮಹಿಳೆಯರು, ಮಕ್ಕಳು ಹಾಗೂ ವಿಕಲಚೇತನ ಪ್ರಯಾಣಿಕರ ಹಿತದೃಷ್ಟಿಯಿಂದ, ಸಾಧ್ಯವಿರುವ ಸಾರಿಗೆ ವಾಹನಗಳಲ್ಲಿ ಸ್ವಯಂ ಚಾಲಿತ ಬಾಗಿಲುಗಳ ವ್ಯವಸ್ಥೆಯನ್ನು ಅಳವಡಿಸಬೇಕು.
ಸ್ವಯಂ ಚಾಲಿತ ಬಾಗಿಲುಗಳ ಅಳವಡಿಕೆಯಿಂದ ಬಸ್ಗಳ ಸುರಕ್ಷತೆ ಹೆಚ್ಚುವುದರ ಜೊತೆಗೆ, ಪ್ರಯಾಣಿಕರು ಬಸ್ ಹತ್ತುವಾಗ ಮತ್ತು ಇಳಿಯುವಾಗ ಸಂಭವಿಸಬಹುದಾದ ಅಪಘಾತಗಳನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಆದ್ದರಿಂದ ಈ ಕುರಿತು ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಬ್ಯಾಡಗಿ ಸಾರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಧ್ಯಕ್ಷರಾದ ಹೆಚ್.ಜಿ. ಚೈಲವಾದಿ, ಎಸ್.ಡಿ. ಬಾರ್ಗಿ, ಬಿ. ಎಸ್. ಕೊಪ್ಪದ ಎಂ. ಸಾಲಿ, ಹೆಚ್.ಎಫ್. ದೊಡ್ಮನಿ ಬಸಣ್ಣ ಹರಿಜನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಮನವಿ ಸಲ್ಲಿಸಿದರು.

