ಜೂ.12, 13, 14 : ಕಾಪು ಹಳೆ ಮಾರಿಗುಡಿ ಸಭಾಂಗಣದಲ್ಲಿ ಹಲಸು ಮತ್ತು ಮಾವು ಮೇಳ
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಶಕ್ತಿ ಇವೆಂಟ್ಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಮೇಳ
(Kaup) ಕಾಪು : ಸ್ಥಳೀಯ ರೈತರಿಗೆ ಪ್ರೋತ್ಸಾಹ, ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶ, ಹಲಸು ಮತ್ತು ಮಾವಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಜೂನ್ 12, 13, 14 ರಂದು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಶಕ್ತಿ ಇವೆಂಟ್ಸ್ ಪ್ರಾಯೋಜಕತ್ವದಲ್ಲಿ ಕಾಪು ಹಳೆ ಮಾರಿಗುಡಿ ಸಭಾಂಗಣದಲ್ಲಿ ಅದ್ಧೂರಿ ‘ಹಲಸು ಮತ್ತು, ಮಾವಿನ ಮೇಳ’ ಆಯೋಜಿಸಲಾಗಿದೆ.
ಈ ಬಗ್ಗೆ ಕಾಪುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ರೈತರಿಗೆ ನೇರ ಮಾರುಕಟ್ಟೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ ಸ್ಥಳೀಯ ರೈತರು ತಾವೇ ಬೆಳೆದ ವಿವಿಧ ತಳಿಯ ಹಲಸು ಮತ್ತು ಮಾವಿನ ಹಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಸೂಕ್ತ ವೇದಿಕೆ ಕಲ್ಪಿಸುವುದು ಮೇಳದ ಉದ್ದೇಶವಾಗಿದೆ.
ಉದ್ಯೋಗ ಸೃಷ್ಟಿ, ಕೃಷಿ ಆಧಾರಿತ ಸಣ್ಣ ಉದ್ಯಮಗಳ ಮೂಲಕ ಸ್ಥಳೀಯ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಮಾರ್ಗದರ್ಶನ ನೀಡುವುದು ಇದರ ಉದ್ದೇಶ ಎಂದರು.
ಮೇಳದ ಮುಖ್ಯಸ್ಥರಾದ ಗುರುಪ್ರಸಾದ್ ಮಾತನಾಡಿ, ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 70 ಮಳಿಗೆಗಳು ಆಗಮಿಸುತ್ತಿದೆ. ಸಾವಯವ ಆಧಾರಿತ ಅಪರೂಪದ ಹಾಗೂ ರುಚಿಕರವಾದ ವಿವಿಧ ತಳಿಯ ಮಾವು ಮತ್ತು ಹಲಸಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಹಲಸು ಮತ್ತು ಮಾವಿನಿಂದ ತಯಾರಿಸಬಹುದಾದ ವೈವಿಧಮಯ ಖಾದ್ಯಗಳು, ಹಪ್ಪಳ, ಉಪ್ಪಿನಕಾಯಿ, ಜ್ಯೂಸ್ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ಇರಲಿದೆ.
ಕೃಷಿ ತಜ್ಞರಿಂದ ಆಧುನಿಕ ಕೃಷಿ ಪದ್ಧತಿ ಮತ್ತು ತಂತ್ರಜ್ಞಾನದ ಕುರಿತು ಮಾಹಿತಿಯು ಇರಲಿದೆ. ಈ ಅಪೂರ್ವ ಕೃಷಿ ಹಬ್ಬಕ್ಕೆ ಸಾರ್ವಜನಿಕರು, ಕೃಷಿ ಆಸಕ್ತರು ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ, ಸಳೀಯ ರೈತರು ಮತ್ತು ವ್ಯಾಪಾರಿಗಳಿಗೆ ಬೆಂಬಲ ನೀಡಬೇಕೆಂದರು.

