ಪುಣ್ಯಗಳ ಪರ್ವತದ ಮಾಸ, ರಮ್ಜಾನ್ ಮಾಸ : ಮೌಲಾನ ಅಬ್ದುಲ್ ಘನಿ ಜಾಮಾಯಿ
ಕಾಪು ಕೊಂಬಗುಡ್ಡೆಯಲ್ಲಿ ನಡೆದ ರಮ್ಜಾನ್ ಸ್ವಾಗತ ಕಾರ್ಯಕ್ರಮ
(Kaup) ಕಾಪು : ಪುಣ್ಯಗಳ ಪರ್ವತವನ್ನೇ ಹೊತ್ತು ಕೊಂಡು, ಅದನ್ನು ಬಯಸುವ ದಾಸರಿಗೆ ನೀಡಲು ಸಿದ್ದವಾಗಿರುವ ಪವಿತ್ರ ಪುಣ್ಯ ರಮ್ಜಾನ್ ಮಾಸ ನಮ್ಮ ಮನೆಬಾಗಿಲಿನ ಬಳಿ ಬರುತಿದ್ದು, ಅದನ್ನು ಅಷ್ಟೇ ಸಂಭ್ರಮದಿಂದ ಸ್ವಾಗತಿಸಲು ನಾವು ಸಿದ್ಧರಿರಬೇಕು ಎಂದು ತೋನ್ಸೆಯ ಅಬುಲೈಸ್ ಮಸ್ಜಿದ್ ನ ಖತೀಬ್ ವ ಇಮಾಮ್ ಆಗಿರುವ ಮೌಲಾನ ಅಬ್ದುಲ್ ಘನಿ ಜಾಮಾಯಿಯವರು ಹೇಳಿದರು.
ಅವರು ಕಾಪು ಜಾಮಿಯಾ ಮಸ್ಜಿದ್ ಜದೀದ್ ಕಲಾನ್ ಕೊಂಬಗುಡ್ಡೆಯಲ್ಲಿ ಕಾಪು ಜಮಾ ಅತೆ ಇಸ್ಲಾಮೀ ಹಿಂದ್ ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಓರ್ಗನೈಜೇಷನ್ (ಎಸ್. ಐ. ಓ) ಹಮ್ಮಿಕೊಂಡ್ಡಿದ್ದ ರಮ್ಜಾನ್ ಸ್ವಾಗತ ಕಾರ್ಯಕ್ರಮದಲ್ಲಿ ಮಾತಾಡುತ್ತಾ ಹೇಳಿದರು.
ನಮ್ಮ ಎಲ್ಲಾ ಆರಾಧನೆಗಳು ಅಲ್ಲಾಹನಿಗಾಗಿಯೇ ಇರಬೇಕು. ಸದಾ ನಮ್ಮ ಹೃದಯವನ್ನು ಸ್ವಚ್ಚವಾಗಿರಿಸಬೇಕು. ಸಂಬಂಧಿಕರೊಂದಿಗೆ ಉತ್ತಮವಾಗಿ ವರ್ತಿಸಬೇಕು. ನಮ್ಮಿಂದ ಆಗಿರುವ ತಪ್ಪನ್ನು ಅವಲೋಕನ ಮಾಡಿ, ಅಲ್ಲಾಹನ ಮುಂದೆ ಮನಸ್ಸಿನಾಳದಿಂದ ಕ್ಷಮೆಯಾಚಿಸಬೇಕು. ನಮ್ಮ ಗರಿಷ್ಠ ಸಮಯ ಕುರ್ ಆನ್ ಅಧ್ಯಯನಕ್ಕೆ ಮೀಸಲಾಗಿಡಬೇಕು. ಇದರಿಂದ ನಮಗೆ ಅಲ್ಲಾಹನ ಸಂಪ್ರೀತಿ ದೊರಕುವುದು. ಈ ಎಲ್ಲಾ ಗುಣಗಳನ್ನು ಮೈಗೂಡಿಸಿ ಕೊಳ್ಳಲು ರಮ್ಜಾನ್ ಮಾಸ ಸೂಕ್ತವಾಗಿದೆ. ಹೀಗೆ ನಾವು ಮಾಡಿದರೆ ರಮ್ಜಾನ್‌ಮಾಸದ ಪುಣ್ಯಗಳನ್ನು ಪಡೆದು ಕೊಳ್ಳಬಹುದು. ಅದಕ್ಕಾಗಿ ಈ ಮಾಸದ ಸ್ವಾಗತಕ್ಕಾಗಿ ನಾವು ಸಿದ್ದರಾಗಿರಬೇಕು ಎಂದು ಹೇಳಿದರು.
ಅತಿಥಿಯಾಗಿರುವ ಎಸ್. ಐ. ಓ. ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ನಿಹಾಲ್ ಕಿದಿಯೂರ್ ರವರು ಮಾತನಾಡಿ, ಕುರ್ ಆನ್ ದೇವನ ವತಿಯಿಂದ ಬಂದ ಗ್ರಂಥವಾಗಿದ್ದು, ಅದು ಜನರಿಗೆ ದೀಪಸ್ಥಂಭ ದಂತೆ ಕತ್ತಲೆಯಲ್ಲಿ ಇರುವವರಿಗೆ ದಾರಿ ತೋರಿಸುವ ಕೆಲಸ ಮಾಡುತ್ತದೆ. ಇದರ ಸದುಪಯೋಗ ಪಡೆದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದರು.
ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿಯವರು ಜಮಾ ಅತೆ ಇಸ್ಲಾಮಿ ಹಿಂದ್ ಮತ್ತು ಎಸ್. ಐ. ಓ. ನ ದ್ಯೇಯೋದ್ದೇಶ ಹಾಗೂ ಉತ್ತಮ ಸಮಾಜ ನಿರ್ಮಾಣದಲ್ಲಿ ಅದರ ಕಾರ್ಯ ಯೋಜನೆಯ ಬಗ್ಗೆ ಮತ್ತು ರಮ್ಜಾನ್ ಮಾಸದ ಸ್ವಾಗತ ಯಾಕಾಗಿ ಎಂದು ವಿವರಿಸುತ್ತಾ ಪ್ರಾಸ್ತವಿಕವಾಗಿ ಮಾತಾಡಿ ಅತಿಥಿಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿದರು.
ಹಾಫಿಜ್ ಎ ಕುರ್ ಆನ್ ಒಬಾದ ಜರ್ರಾರ್ ರವರ ಕುರ್ ಆನ್ ಪಠನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ವೇದಿಕೆಯಲ್ಲಿ ಜಾಮಿಯ ಮಸ್ಜಿದ್ ಜದೀದ್ ಕಲಾನ್ ನ ಅಧ್ಯಕ್ಷರು ಜನಾಬ್ ಶಭಿ ಅಹಮದ್ ಕಾಝಿ ಉಪಸ್ಥಿತರಿದ್ದರು.
ಎಸ್. ಐ.ಓ. ಸದಸ್ಯ, ಅಬ್ದುಲ್ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಇಕ್ಬಾಲ್ ಸಾಹೇಬ್ ವಂದಿಸಿದರು.

