
ಪುಳಿಮಜಲಿನ ಮೂಲ ಮನೆಯಲ್ಲಿ ಸುಹಾಸ್ ಅಂತ್ಯಕ್ರಿಯೆ, ಮುಗಿಲು ಮುಟ್ಟಿದ ಘೋಷಣೆ, ಅಂತಿಮದರ್ಶನಕ್ಕಾಗಿ ನೆರೆದ ಜನಸ್ತೋಮ
(Bantwala) ಬಂಟ್ವಾಳ : ಬಜಪೆಯಲ್ಲಿ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಅಂತಿಮ ಸಂಸ್ಕಾರವು ಕಾವಳಮೂಡೂರು ಗ್ರಾಮದ ಕಾರಿಂಜಬೈಲು ಪುಳಿಮಜಲುನಲ್ಲಿರುವ ಮೂಲಮನೆಯ ಪಕ್ಕದ ಗದ್ದೆಯಲ್ಲಿ ಸುಮಾರು 3.30 ರ ವೇಳೆಗೆ ನೆರವೇರಿತು.
ಈ ಸಂದರ್ಭ ಹಿಂದೂಪರಸಂಘಟನೆ ಕಾರ್ಯಕರ್ತರ ಘೋಷಣೆ ಮುಗಿಲುಮುಟ್ಟಿತು. ಸಾವಿರಾರು ಸಂಖ್ಯೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು, ಶಾಸಕರು, ಹಿಂದೂ ಮುಖಂಡರು ಸೇರಿದ್ದರು.
ಪಾರ್ಥಿವ ಶರೀರ ಮನೆಗೆ ತಲುಪುತ್ತಿದ್ದಂತೆ ಅಂತಿಮ ದರ್ಶನಕ್ಕೆ ಜನಸ್ತೋಮವೇ ಹರಿದು ಬಂತು. ಬಂಟ್ವಾಳ ಸಹಿತ ಜಿಲ್ಲೆಯ ವಿವಿಧ ಭಾಗಗಳಿಂದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಅಗಮಿಸಿದ್ದರು. ವಿ.ಹಿ.ಪ.ನ ರಾಜ್ಯ ಕಾರ್ಯದರ್ಶಿ ಮಿಲಿಂದ ಪರಾಂಡೆ, ಆರ್ ಎಸ್ ಎಸ್ ಮುಖಂಡರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಶಾಸಕರಾದ ಹರೀಶ್ ಪೂಂಜಾ, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗಿರಥಿ ಮುರುಳ್ಯ, ಶಾಸಕ ಯಶ್ಪಾಲ್ ಸುವರ್ಣ, ವಿ.ಪ.ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಘ ಪರಿವಾರ, ಸಂಘಟನೆಯ ಮುಖಂಡರಾದ ಶರಣ್ ಪಂಪ್ ವೆಲ್, ಅರುಣ್ ಕುಮಾರ್ ಪುತ್ತಿಲ, ಪುನೀತ್ ಕೆರೆಹಳ್ಳಿ, ಹರಿಕೃಷ್ಣ ಬಂಟ್ವಾಳ, ಕಾವಳ ಮೂಡೂರು ಗ್ರಾ.ಪಂ. ಅಧ್ಯಕ್ಷ ಅಜಿತ್ ಶೆಟ್ಟಿ, ಮುರಳೀಕೃಷ್ಣ ಹಂಸತಡ್ಕ, ಮಹೇಶ್ ಶೆಟ್ಟಿ ತಿಮರೋಡಿ, ಚೆನ್ನಪ್ಪ ಕೋಟ್ಯಾನ್, ರವೀಶ್ ಶೆಟ್ಟಿ ಕಾರ್ಕಳ, ಸುದರ್ಶನ್ ಬಜ, ಡೊಂಬಯ ಅರಳ ಮೊದಲಾದವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಆರಂಭದಿಂದ ಕೊನೆಯವರೆಗೂ ಕುಟುಂಬದೊಂದಿಗಿದ್ದು ಅಂತ್ಯಕ್ರಿಯೆಯ ಸಂಪೂರ್ಣ ಉಸ್ತುವಾರಿ ವಹಿಸಿದ್ದರು.
ಸುಹಾಸ್ ಮನೆಗೆ ತೆರಳುವ ಅಗಲ ಕಿರಿದಾದ ರಸ್ತೆಯನ್ನು ಬೆಳ್ಳಂಬೆಳಗ್ಗೆಯೇ ಜೆಸಿಬಿ ಮೂಲಕ ಅಗಲುಗೊಳಿಸುವ ಕಾರ್ಯವನ್ನು ಮಾಡಿಸಿದ್ದರು.
ಮೈಸೂರಿನಲ್ಲಿ ಓದಿದ್ದರು:
ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಶೆಟ್ಟಿ ಅವರು ಮೂಲತ: ಬಂಟ್ವಾಳ ತಾಲೂಕಿನ ಕಾರಿಂಜಬೈಲ್ ಪುಳಿಮಜಲಿನವರು. ತಂದೆ ಮೋಹನ್ ಶೆಟ್ಟಿ ಬಜಪೆಯವರು. ಈ ಹಿಂದೆ ಮೈಸೂರು ಕೆ.ಆರ್ ನಗರದಲ್ಲಿದ್ದು, ಬಳಿಕ ಬಜಪೆಯಲ್ಲಿ ವಾಸವಿದ್ದರು.
ಸುಹಾಸ್ ಶೆಟ್ಟಿ ಪಿಯುಸಿವರೆಗೆ ಕೆ.ಆರ್. ನಗರದಲ್ಲಿ ಶಿಕ್ಷಣ ಪಡೆದಿದ್ದರು. ಪುಳಿಮಜಲುವಿನಲ್ಲಿ ಸುಲೋಚನಾ ಶೆಟ್ಟಿ ಅವರಿಗೆ ತೋಟ, ಮನೆ ಇದ್ದು ಪ್ರಸ್ತುತ ಕಿರಿಯ ಪುತ್ರ ಸುಹಾನ್ ಶೆಟ್ಟಿ ಹಾಗೂ ಪತಿ ಜತೆ ಇಲ್ಲಿಯೇ ವಾಸವಾಗಿದ್ದಾರೆ. ಸುಹಾಸ್ ಶೆಟ್ಟಿ ಅವರು ಉಡುಪಿಯಲ್ಲಿ ಉದ್ಯಮ ನಡೆಸುತ್ತಿದ್ದು, ಭಜರಂಗದಳದ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.
ಕಳೆದ ರವಿವಾರ ಮನೆಗಾಗಮಿಸಿದ ಸುಹಾಸ್ ಕಾರಿಂಜ ದೇವಸ್ಥಾನಕ್ಕೆ ತೆರಳಿ ರಂಗಪೂಜೆ ಸಲ್ಲಿಸಿದ್ದರು.
ಬಳಿಕ ಬೆಳ್ತಂಗಡಿಯಲ್ಲಿ ನಡೆದ ತಂದೆಯ ತಮ್ಮನ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎ.30 ರಂದು ತಂದೆ, ತಾಯಿ ಜತೆಗಿದ್ದ ಅವರು ಬಳಿಕ ಮಂಗಳೂರಿಗೆ ತೆರಳಿದ್ದರು. ಮೇ 1ರಂದು ವಾಪಾಸು ಕಾರಿಂಜಕ್ಕೆ ಬರುವವರಿದ್ದು ಅಷ್ಟರಲ್ಲಿ ದುರಂತ ನಡೆದು ಹೋಗಿದೆ. ಸುಹಾಸ್ ಅವರ ತಾಯಿಯ ಸಹೋದರ ಚಂದ್ರಶೇಖರ ಶೆಟ್ಟಿ ಪುಳಿಮಜಲು ಅವರು ಕಾರಿಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾಗಿದ್ದುದರಿಂದ ಸುಹಾಸ್ ಅವರು ಕಾರಿಂಜ ದೇವಸ್ಥಾನದ ನಂಟು ಹೊಂದಿದ್ದರು.
ಸುಲೋಚನಾ ಶೆಟ್ಟಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಸುಹಾಸ್ ಅವರು ಮನೆಯ ಆಧಾರ ಸ್ಥಂಭವಾಗಿದ್ದರು. ಮಗನಿಗೆ ಜೀವ ಬೆದರಿಕೆ ಇರುವ ಬಗ್ಗೆ ಹೆತ್ತವರಲ್ಲಿ ಆತಂಕವಿದ್ದು, ಜಾಗರೂಕನಾಗಿರುವಂತೆ ಸುಹಾಸ್ ಗೆ ತಿಳಿಸಿದ್ದರೆನ್ನಲಾಗಿದೆ.
ಮಗನ ಸಾವಿಗೆ ನ್ಯಾಯ ಸಿಗಲಿ ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಪುಳಿಮಜಲುನಲ್ಲಿ ಸುಲೋಚನಾ ಶೆಟ್ಟಿ ಅವರ ತಾಯಿಯ ಕುಟುಂಬದ ಮನೆಯಿದ್ದು, ವರ್ಷಕ್ಕೊಂದು ಬಾರಿ ಇಲ್ಲಿ ಎಲ್ಲರೂ ಒಟ್ಟಾಗಿ ದೈವದ ಸೇವೆ ಮಾಡುತ್ತಾರೆ. ಇದೇ ಮನೆಯಲ್ಲಿ ಸುಹಾಸ್ ಶೆಟ್ಟಿ ಅವರ ಅಂತಿಮ ಕಾರ್ಯಗಳು ನೆರವೇರಿದ್ದು, ಬಳಿಕ ಸಮೀಪದ ಗದ್ದೆಯಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು.
ಬಿ.ಸಿ.ರೋಡು ಸಹಿತ ದಾರಿಯುದ್ದಕ್ಕೂ ಸುಹಾಸ್ ಅಂತಿಮ ದರ್ಶನ ಪಡೆದ ಸಾರ್ವನಿಕರು, ಹಿಂದೂ ಕಾರ್ಯಕರ್ತರು, ಬಂದ್ ಯಶಸ್ವಿ
ಬಜಪೆಯ ಕಿನ್ನಿಪದವಿನಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳ ದಾಳಿಯಿಂದ ಹತ್ಯೆಗೊಳಗಾದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಅಂತಿಮ ಯಾತ್ರೆ ಮಂಗಳೂರಿನ ಆಸ್ಪತ್ರೆಯಿಂದ ಕಾರಿಂಜದಲ್ಲಿರುವ ಪುಳಿಮಜಲಿನಲ್ಲಿರುವ ಅವರ ನಿವಾಸಕ್ಕೆ ತೆರಳಿದ ಸಂದರ್ಭ, ಬಿ.ಸಿ.ರೋಡಿನಲ್ಲಿ ಅಪಾರ ಸಂಖ್ಯೆಯ ಹಿಂದು ಸಂಘಟನೆ ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು.
ಈ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಸುಹಾಸ್ ಶೆಟ್ಟಿ ಅಮರ್ ರಹೇ ಎಂದು ಘೋಷಣೆ ಹಾಕಿದರು.
ಬೆಳಗ್ಗಿನಿಂದಲೇ ಬಿ.ಸಿ.ರೋಡಿನಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು. ಈ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.
ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರೇ ಖುದ್ದು ಯಾವುದೇ ರೀತಿಯ ಅಡಚಣೆಯಾಗದಂತೆ ಸುಹಾಸ್ ಶೆಟ್ಟಿಯ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟರು.
ಮಂಗಳೂರಿನಿಂದ ಕಾರಿಂಜದ ಪುಳಿಮಜಲು ನಿವಾಸದವರೆಗೂ ಆರ್ ಎಸ್ ಎಸ್
ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ರಾಜ್ಯ ನಾಯಕರಾದ ವಿಕಾಸ್ ಪುತ್ತೂರು,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ಪ್ರಸಾದ್ ಕುಮಾರ್ ರೈ, ಸಂದೇಶ್ ಶೆಟ್ಟಿ ಅರೆಬೆಟ್ಟು, ತಿರುಲೇಶ್ ಬೆಳ್ಳೂರು, ಪ್ರಶಾಂತ್ ಕೆಂಪುಗುಡ್ಡೆ, ನರಸಿಂಹ ಮಾಣಿ ಸಹಿತ ಹಿಂದು ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿ.ಸಿ.ರೋಡು,ಬಂಟ್ವಾಳ ಬಂದ್:
ಸುಹಾಸ್ ಹತ್ಯೆಯ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲೆಯಲ್ಲಿ ಶುಕ್ರವಾರ ಬಂದ್ ಗೆ ಕರೆನೀಡಿದ ಹಿನ್ನಲೆಯಲ್ಲಿ
ಬಿ.ಸಿ.ರೋಡ್, ಬಂಟ್ವಾಳ, ಪುಂಜಾಲಕಟ್ಟೆ, ಕಾರಿಂಜ, ವಗ್ಗ, ಕಲ್ಲಡ್ಕ, ಸಿದ್ದಕಟ್ಟೆ, ವಾಮದಪದವು ಸಹಿತ ಪೇಟೆಯ ಎಲ್ಲ ಅಂಗಡಿ, ಮುಂಗಟ್ಟುಗಳು ಸರವಯಂಪ್ರೇರಿತವಾಗಿ ಮುಚ್ಚಿದ್ದವು.
ಹಾಲು, ಪತ್ರಿಕೆ, ಮೆಡಿಕಲ್, ಸರಕಾರಿ ಕಚೇರಿಗಳು ಹೊರತುಪಡಿಸಿದರೆ, ಯಾವುದೂ ಬಾಗಿಲು ತೆರೆದಿರಲಿಲ್ಲ. ದೂರದ ಊರುಗಳಿಂದ ಬಂದಿದ್ದ ಪ್ರಯಾಣಿಕರು ಈ ಹಿನ್ನೆಲೆಯಲ್ಲಿ ಪರದಾಟ ಅನುಭವಿಸಿದರು.
ಗ್ರಾಮೀಣ ಭಾಗಗಳಿಗೆ ಹೋಗಲು ಬಸ್ಸುಗಳೂ ಇಲ್ಲದೆ ಸಂಕಷ್ಟ ಅನುಭವಿಸಿದ ವೇಳೆ ಹಿಂದು ಸಂಘಟನೆಯ ಕಾರ್ಯಕರ್ತರು ಅವರನ್ನು ವಾಹನಗಳಲ್ಲಿ ಮನೆಗೆ ತೆರಳಲು ಅವಕಾಶ ಕಲ್ಪಿಸಿದರು.
ಬೆಳಗ್ಗಿನ ಕೆಲವು ಹೊತ್ತುಗಳ ಕಾಲ ಖಾಸಗಿ, ಸರಕಾರಿ ಬಸ್ ಗಳು, ಆಟೋರಿಕ್ಷಾಗಳು ಸಂಚರಿಸಿದ್ದು, ಬಳಿಕ ಸ್ವಯಂ ಪ್ರೇರಿತವಾಗಿ ವಾಹನ ಓಡಾಟವನ್ನು ಸ್ಥಗಿತಗೊಳಿಸಿದರು. ಬಂಟ್ವಾಳ ತಾಲೂಕಿನಾದ್ಯಂತ ಬಂದ್ ಯಶಸ್ವಿಯಾಗಿ ನಡೆದಿದೆ.
ಸುಮಾರು 11 ಗಂಟೆ ವೇಳೆ ಬಿ.ಸಿ.ರೋಡ್ ಬಸ್ ನಿಲ್ದಾಣದ ಸಮೀಪ ಹಿಂದು ಸಂಘಟನೆಯ ಕಾರ್ಯಕರ್ತರು, ನಾಯಕರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸುಹಾಸ್ ಶೆಟ್ಟಿ ಅವರ ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಸ್ಥಳದಲ್ಲಿದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಯಿತು.
ಆಕ್ರೋಶಿತರಿಂದ ರಿಕ್ಷಾಕ್ಕೆ ಮುತ್ತಿಗೆ:
ಮೃತದೇಹ ಆಗಮಿಸುವ ವೇಳೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಯಿತು. ಆದಾಗ್ಯೂ ಆಟೊ ರಿಕ್ಷಾವೊಂದು ಪ್ರಯಾಣಿಕರನ್ನು ಕೂರಿಸಿ ಜನರ ಗುಂಪಿನ ನಡುವೆ ಸಂಚರಿಸಿದ ವೇಳೆ ಸೇರಿದ್ದವರು ಆಕ್ರೋಶಿತರಾಗಿ ಆಟೋ ರಿಕ್ಷಾಕ್ಕೆ ಮುತ್ತಿಗೆ ಹಾಕಿ ಚಾಲಕನನ್ನು ತರಾಟೆ ತೆಗೆದುಕೊಂಡ ಘಟನೆಯೂ ನಡೆಯಿತು. ಕೂಡಲೇ ಸಂಘಟನೆಯ ಹಿರಿಯರು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಆಟೋವನ್ನು ಹೋಗಲು ಬಿಟ್ಟರು. ಬಳಿಕ ಬಿ.ಸಿ.ರೋಡ್ ಬಸ್ ನಿಲ್ದಾಣದ ಮುಂಭಾಗ ಕಾರ್ಯಕರ್ತರು ಮೃತದೇಹದ ಅಂತಿಮ ದರ್ಶನ ಪಡೆದರು.
ಬಿ.ಸಿ.ರೋಡಿನಿಂದ ಪುಳಿಮಜಲು ಸುಹಾಸ್ ಮನೆಯವರೆಗೂ ದಾರಿ ಮಧ್ಯೆ ಬಂಟ್ವಾಳ ಬೈಪಾಸ್, ವಗ್ಗ ಜಂಕ್ಷನ್ ಮೊದಲಾದೆಡೆ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಯಿತು.
ಐಜಿ ಅಮಿತ್ ಸಿಂಗ್, ಎಸ್.ಪಿ.ಯತೀಶ್ ಎನ್ , ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ, ಎಸ್.ಐ.ರಾಮಕೃಷ್ಣ ಅವರು ಪರಿಸ್ಥಿತಿಯನ್ನು ನಿಭಾಯಿಸಿದರು.
ಸದಾ ವಾಹನ, ಜನರಿಂದ ಬಿಝಿಯಾಗಿದ್ದ
ಬಿ.ಸಿ.ರೋಡು ಬಸ್ ನಿಲ್ದಾಣ ಸಹಿತ ಎಲ್ಲೆಡೆ ಬಿಕೋ ಆಗಿತ್ತು. ಎಲ್ಲೆಡೆ ಪೊಲೀಸರೇ ಕಾಣಿಸಿಕೊಳ್ಳುತ್ತಿದ್ದರು. ಸಂಜೆ 4 ಗಂಟೆಯ ಬಳಿಕ ಸರಕಾರಿ ಬಸ್ ಸಹಿತ ಕೆಲ ಖಾಸಗಿ ವಾಹನಗಳು,ಆಟೋರಿಕ್ಷಾ ಓಡಾಟ ಆರಂಭಿಸಿವೆ.
ಶಾಸಕ ನಾಯ್ಕ್ ಖಂಡನೆ
ಮಂಗಳೂರು ಹೊರವಲಯದ ಬಜಪೆಯ ಕಿನ್ನಿಪದವಿನಲ್ಲಿ ಗುರುವಾರ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಹತ್ಯೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ತೀವ್ರವಾಗಿ ಖಂಡಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೊಲೆ ಸುಲಿಗೆ,ಗಲಭೆಗಳು ನಿರಂತರವಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣಗೊಂಡಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಆರೋಪಿಸಿದ್ದಾರೆ.
ಕಾಂಗ್ರೆಸ್ ನ ತುಷ್ಠೀಕರಣ ನೀತಿ, ಒಲೈಕೆ ರಾಜಕಾರಣ, ಎಸ್ ಡಿಪಿಐ ಕಾರ್ಯಕರ್ತರ ಕೇಸು ವಾಪಾಸ್ ಪಡೆದಿರುವುದು ಕುಮ್ಮುಕ್ಕು ನೀಡಿದಂತಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಕೋಮುಗಲಭೆಗಳು ಪ್ರಾರಂಭವಾಗಿದ್ದು, ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

