ಪ್ರಮಾಣ ವೈಪರೀತ್ಯದಿಂದ ಚಿತ್ರ ವಿಕಾರ :ಪಿ.ಎನ್ ಆಚಾರ್ಯ
ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ವಿದ್ಯಾರ್ಥಿ, ಶಿಕ್ಷಕರಿಗಾಗಿ ಚಿತ್ರಕಲಾ ಪ್ರಪಂಚ ಕಾರ್ಯಕ್ರಮ
(Udupi) ಉಡುಪಿ: “ಕಲ್ಪನೆ ಮತ್ತು ವಾಸ್ತವ” ಹದವಾಗಿ ಎರಕಗೊಂಡಾಗ ಉತ್ತಮ ಚಿತ್ರ ರಚನೆ ಸಾಧ್ಯವಾಗುತ್ತದೆ. ವಸ್ತು ಮತ್ತು ಮಾಧ್ಯಮದ ನಡುವೆ ಸಮನ್ವಯವಿರಬೇಕು. ಚಿತ್ರ ರಚನೆಯಲ್ಲಿ ಪ್ರಮಾಣ ಬದ್ಧತೆ ಬಲುಮುಖ್ಯ ಪಾತ್ರವಹಿಸುತ್ತದೆ. ಪ್ರಮಾಣ ಏರುಪೇರಾದರೆ ಚಿತ್ರ ವಿಕಾರವಾಗುತ್ತದೆ ಎಂದು ಖ್ಯಾತ ಚಿತ್ರ ಕಲಾವಿದ, ರಾಜ್ಯಪ್ರಶಸ್ತಿ ಪುರಸ್ಕೃತ ಪಿ.ಎನ್ ಆಚಾರ್ಯ ಹೇಳಿದ್ದಾರೆ.
ಅವರು ಉಡುಪಿ ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಮೂರನೆಯ ಸೆಮಿಸ್ಟರ್ ವಿದ್ಯಾರ್ಥಿ ಶಿಕ್ಷಕರಿಗಾಗಿ ಚಿತ್ರಕಲಾ ಪ್ರಪಂಚ ಎಂಬ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.
ಆಚಾರ್ಯರು ಜಲವರ್ಣ ಚಿತ್ರಕಲೆ, ದಾರಕಲೆ ಮತ್ತು ವೈದ್ಯಕೀಯ ಚಿತ್ರಕಲೆಯ ಬಗ್ಗೆ ವಿಶೇಷವಾದ ಮಾಹಿತಿ ನೀಡಿದ್ದಲ್ಲದೆ ಪ್ರಾತ್ಯಕ್ಷಿಕೆಯನ್ನೂ ಒದಗಿಸಿದರು.
ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಅನಂತರಾಜ್ ಆಚಾರ್ಯ ಸ್ವಾಗತ ಕೋರಿ, ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಕಾರ್ತಿಕ್ ವಂದಿಸಿದರು.

