ಮಲಗಿದ್ದವರ ಮೇಲೆ ಜೆಸಿಬಿ ಹರಿದು ಮೂವರು ಸ್ಥಳದಲ್ಲೇ ದುರ್ಮರಣ; ರಾಜ್ಯದಲ್ಲಿ ನಡೆದ ಹೃದಯವಿದ್ರಾಹಕ ಘಟನೆ
ರಾಯಚೂರು: ಜೆಸಿಬಿ ಹರಿದ ಪರಿಣಾಮ ಸ್ಥಳದಲ್ಲೇ ಮೂವರು ಸಾವನಪ್ಪಿರುವ ದಾರುಣ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಮೃತರನ್ನು ಛತ್ತೀಸಗಢ ಮೂಲದ ವಿಷ್ಣು (26), ಶಿವರಾಮ್ (28) ಹಾಗೂ ಬಲರಾಮ್(30) ಎಂದು ಗುರುತಿಸಲಾಗಿದೆ.
ಗ್ರಾಮದ ಜಮೀನೊಂದಲ್ಲಿ ಬೋರ್ವೆಲ್ ಕೊರೆಯಲು ಇವರು ಆಗಮಿಸಿದ್ದರು. ಬೋರ್ವೆಲ್ ಕೊರೆದ ನಂತರ ರಾತ್ರಿಯ ವೇಳೆ ಹೊಲದಲ್ಲಿನ ಕಾಲು ದಾರಿಯಲ್ಲಿ ಮೂವರು ನಿದ್ರೆ ಮಾಡುತ್ತಿದ್ದರು.
ಬೋರ್ವೆಲ್ ಕೊರೆಸುತ್ತಿದ್ದರಿಂದ ರಸ್ತೆ ಇರಬಹುದೆಂದು ಕಾಲು ದಾರಿಯಲ್ಲಿ ಬಂದ ಜೆಸಿಬಿ ಮಲಗಿದ್ದವರ ಮೇಲೆಯೇ ಹರಿದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ದೇವದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೃತರ ಕುಟುಂಬಸ್ಥರಿಗೆ ಮಾಹಿತಿಯನ್ನು ರವಾನಿಸಲಾಗಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಈ ಕುರಿತು ಕೇಸ್ ದಾಖಲಾಗಿದೆ.

