ಮಲ್ಪೆ ; “ನನ್ನನ್ನು ಕರೆದು ಹೆಬ್ಬೆಟ್ಟು ಹಾಕಿಸಿದರು” ಮೀನು ಕದ್ದು ಥಳಿತಕ್ಕೊಳಗಾದ ಮಹಿಳೆ ಹೇಳಿಕೆ
(Malpe) ಉಡುಪಿ: ಮೀನು ಕದ್ದ ಆರೋಪದಲ್ಲಿ ಮಹಿಳೆ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಇನ್ನೂ ತಣ್ಣಗಾಗಿಲ್ಲ. ಈ ಸಂಬಂಧ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಮಹಿಳೆಗೆ ಥಳಿಸಿ ಜಾತಿ ನಿಂದನೆ ಮಾಡಿದ್ದರು ಎನ್ನಲಾದ ನಾಲ್ವರು ಮೀನುಗಾರ ಮಹಿಳೆಯರು ಈಗಾಗಲೇ ಜೈಲಿನಲ್ಲಿದ್ದಾರೆ.
ಈ ನಡುವೆ ಕೇಸ್ ವಾಪಸ್ಸು ಪಡೆಯುವಂತೆ ಮಾಧ್ಯಮಗಳಿಗೆ ಮತ್ತೊಮ್ಮೆ ಸಂತ್ರಸ್ತೆ ಲಕ್ಕಿ ಬಾಯಿ ಹೇಳಿಕೆ ನೀಡಿದ್ದಾರೆ. “ನಾನು ಮೀನು ಕದ್ದಿರುವುದು ಹೌದು. ಅವತ್ತೇ ರಾತ್ರಿ ರಾಜಿ ಮಾಡಿ ಬಂದಿದ್ದೇವೆ.
ರಾಜಿ ಮಾಡಿದ ನಂತರ ಮರುದಿನ ಫೋನ್ ಮಾಡಿದರು. ನಮ್ಮ ಜನ ಯಾರೂ ಇಲ್ಲ ಎಂಬ ಕಾರಣಕ್ಕೆ ನಾನು ಠಾಣೆಗೆ ಹೋಗಿಲ್ಲ. ಮನೆಗೆ ಬಂದು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋದರು. ಸಹಿ ಮಾಡಲು ಹೇಳಿದರು. ನನಗೆ ಓದಲು ಬರುವುದಿಲ್ಲ. ನಿನ್ನೆ ನೀನು ರಾಜಿ ಆಗಿದ್ದೀಯಾ ಇವತ್ತು ಹೆಬ್ಬೆಟ್ಟು ಹಾಕು ಅಂದರು. ಅದಕ್ಕೆ ನಾನು ಹೆಬ್ಬೆಟ್ಟು ಹಾಕಿದ್ದೇನೆ. ಮುಂದೆ ಏನೆಲ್ಲ ಆಗಿದೆಯೋ ಗೊತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.

