‘ಮಾದಕ ವ್ಯಸನ ದೇಶದ ಭವಿಷ್ಯಕ್ಕೆ ಕಂಟಕ‘ : ಕಾಪು ವೃತ್ತ ನಿರೀಕ್ಷಕ ಅಝ್ಮತ್ ಆಲಿ
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ
ಕಾಪು: ಮಾದಕ ವಸ್ತುಗಳು ದೇಶದ ಆರ್ಥಿಕತೆಯನ್ನೇ ಬುಡಮೇಲುಗೊಳಿಸುತ್ತವೆ. ಮುಂದಿನ ಭವಿಷ್ಯವಾದ ಯುವ ಸಂಪನ್ಮೂಲವು ಇವುಗಳ ವ್ಯಸನಕ್ಕೆ ತುತ್ತಾದರೆ ದೇಶದ ಭವಿಷ್ಯಕ್ಕೇ ಕಂಟಕ ಎದುರಾಗಲಿದೆ ಎಂದು ಕಾಪು ಸರ್ಕಲ್ ಇನ್‌ಸ್ಪೆಕ್ಟರ್ ಅಝ್ಮತ್ ಆಲಿ ಅಭಿಪ್ರಾಯ ಪಟ್ಟರು
ಪ್ರಜಾವಾಣಿ ಪತ್ರಿಕೆಯ ಸಹಯೋಗದಲ್ಲಿ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಾದಕ ವ್ಯಸನ ಮುಕ್ತ ಜಾಗೃತಿ ಸಮಿತಿ, ಯೂತ್ ರೆಡ್‌ಕ್ರಾಸ್ ಸಮಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮುಕ್ತ ಹಾಗೂ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಬೇಕಾದರೆ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ. ಯುವ ಸಮೂಹವೇ ಇದರ ನೇತೃತ್ವವನ್ನು ವಹಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
ಯಾರು ಮಾದಕ ವ್ಯಸನಗಳಿಗೆ ದಾಸರಾಗುತ್ತಾರೋ ಅವರು ಮುಂದೆ ಮಾದಕ ದ್ರವ್ಯಗಳು ಸಿಗದಿದ್ದರೆ ಕಳವು, ಸುಲಿಗೆ ಮೊದಲಾದ ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಅಪರಾಧಿಕ ಚಟುವಟಿಕೆಗಳಲ್ಲಿ ಬಂಧನಕ್ಕೊಳಗಾಗುವವರಲ್ಲಿ ಹೆಚ್ಚಿನವರು ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗಿರುವುದು ಕಂಡು ಬರುತ್ತಿದೆ. ಯಾರು ಪೋಷಕರ, ಶಿಕ್ಷಕರ ಮಾತುಗಳನ್ನು ಕೇಳುವುದಿಲ್ಲವೋ ಅವರು ದಾರಿ ತಪ್ಪುತ್ತಾರೆ ಮತ್ತು ವ್ಯಸನಗಳಿಗೆ ಬಲಿಯಾಗುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾದವರ ಸಹವಾಸ ಮಾಡಬಾರದು. ಅವರ ಸ್ನೇಹದಿಂದ ನೀವೂ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆಗಳಿರುತ್ತವೆ. ಕಲಿಕೆಯ ಕಡೆಗೆ ಹೆಚ್ಚಿನ ಗಮನ ನೀಡಿದರೆ ನಿಮ್ಮ ಬದುಕು ಉಜ್ವಲವಾಗುತ್ತದೆ ಎಂದರು.
ಶಿರ್ವ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಂಜುನಾಥ್ ಸೈಬರ್ ಕ್ರೈಂ ವಿಷಯದ ಬಗ್ಗೆ ಮಾತನಾಡಿ, ಡಿಜಿಟಲ್ ಅರೆಸ್ಟ್ ಎಂಬ ಪರಿಕಲ್ಪನೆಯು ಪೊಲೀಸ್ ಇಲಾಖೆಯಲ್ಲಿಯೇ ಇಲ್ಲ. ಆದ್ದರಿಂದ ಆನ್‌ಲೈನ್‌ನಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ವೇಷದಲ್ಲಿ ಬರುವ ಮೋಸಗಾರರನ್ನು ನಂಬಬೇಡಿ ಎಂದು ಸಲಹೆ ನೀಡಿದರು.
ನಮ್ಮ ಮೊಬೈಲ್‌ನಲ್ಲಿರುವ ದತ್ತಾಂಶವನ್ನು ಯಾರು ಬೇಕಾದರೂ ಕದಿಯಬಹುದು. ಈ ಕಾರಣಕ್ಕೆ ಮೊಬೈಲ್ ಬಳಕೆಯ ವೇಳೆ ಅತ್ಯಂತ ಎಚ್ಚರಿಕೆ ವಹಿಸಬೇಕು. ಇಂದು ಕೆಲಸ ಕೊಡಿಸುವ ಆಮಿಷವೊಡ್ಡಿ, ಟ್ಯೂಷನ್ ಹೆಸರಿನಲ್ಲೂ ಸೈಬರ್ ಅಪರಾಧ ಪ್ರಕರಣಗಳು ನಡೆಯುತ್ತಿರುತ್ತವೆ. ನಿಮ್ಮ ಮೊಬೈಲ್‌ಗಳಿಗೆ ಬರುವ ಎಪಿಕೆ ಫೈಲ್‌ಗಳ ಬಗ್ಗೆ ಎಚ್ಚರವಿರಲಿ.
ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು.
ಯೂತ್ ರೆಡ್‌ಕ್ರಾಸ್ ಸಮಿತಿ ಸಂಯೋಜಕ ರಾಘವ ನಾಯ್ಕ್, ಮಾದಕ ವ್ಯಸನ ಮುಕ್ತ ಜಾಗೃತಿ ಸಮಿತಿ ಸಂಯೋಜಕಿ ಸವಿತಾ, ಎನ್‌ಎಸ್‌ಎಸ್ ಯೋಜನಾಧಿಕಾರಿ ಮಂಜುಳಾ ಎಚ್.ಎಸ್. ಉಪಸ್ಥಿತರಿದ್ದರು.
ಪತ್ರಕರ್ತ ಹಮೀದ್ ಪಡುಬಿದ್ರಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರೀತಿ ಕಾರ್ಯಕ್ರಮ ನಿರೂಪಿಸಿದರು. ಸಂಜನಾ ವಂದಿಸಿದರು.

