ಮಾ. 28: ಪಲಿಮಾರು ಸಪ್ತಸ್ವರ ಕಲಾ ಕೇಂದ್ರದ ಆಯೋಜನೆಯಲ್ಲಿ ಭಜನಾ ಸ್ಪರ್ಧೆ
ದ. ಕ -ಉಡುಪಿ ಜಿಲ್ಲೆಗಳ ಪ್ರಸಿದ್ಧ 7 ಆಹ್ವಾನಿತ ಭಜನಾ ತಂಡಗಳಿಂದ “ಭಜನಾ ಸ್ಪರ್ಧೆ”
(Padubidri) ಪಡುಬಿದ್ರಿ: ಪಲಿಮಾರಿನ ಸಪ್ತಸ್ವರ ಕಲಾ ಕೇಂದ್ರದ 12ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರಸಿದ್ಧ ಆಹ್ವಾನಿತ ಭಜನಾ ತಂಡಗಳಿಂದ “ಭಜನಾ ಸ್ಪರ್ಧೆ-2026”ನ್ನು ಮಾರ್ಚ್ 27ರಂದು ಆಯೋಜಿಸಲಾಗಿದೆ ಎಂದು ಸಪ್ತಸ್ವರ ಕಲಾ ಕೇಂದ್ರದ ಅಧ್ಯಕ್ಷ ಸಂದೀಪ್ ಪಲಿಮಾರ್ ಅವರು ಬುಧವಾರ ಕಾಪು ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಶಿಸಿ ಹೋಗುತ್ತಿರುವ ಸಂಸ್ಕೃತಿ, ಭಜನಾ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭಜನೆಯನ್ನು ಸ್ಪರ್ಧಾತ್ಮಕ ರೂಪದಲ್ಲಿ ನಡೆಸುವ ಮೂಲಕ ಇನ್ನೂ ಹೆಚ್ಚಿನ ಯುವ ಜನತೆ ಭಜನೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುವುದು ಮೂಲ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಶನಿವಾರ ಬೆಳಿಗ್ಗೆಪಲಿಮಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಎಲ್ಲಾ ಭಜನಾ ತಂಡದ ಸದಸ್ಯರನ್ನೊಳಗೊಂಡಂತೆ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಗುವುದು. ಬಳಿಕ ಶ್ರೀ ಭುವನೇಂದ್ರ ತೀರ್ಥ ಸಭಾಭವನದಲ್ಲಿ ಉದ್ಘಾಟನಾ ಸಮಾರಂಭವು ಡಾ. ಪ್ರಭಾ ನಂಬಿಯಾರ್ ಹಾಗೂ ಉಪಸ್ಥಿತ ಗಣ್ಯರಿಂದ ಉದ್ಘಾಟನಾ ಸಮಾರಂಭ ನೆರವೇರಲಿದೆ.
ಸರಸ್ವತಿ ಪೂಜೆ ಸಂಪನ್ನಗೊಳಿಸಿ ಹಾಗೂ ಚೀಟಿ ಎತ್ತುವ ಮೂಲಕ ಭಜನೆಗೆ ಸಾಂಕೇತಿಕ ಚಾಲನೆ ನೀಡಲಾಗುವುದು.
ಬೆಳಿಗ್ಗೆ 9 ರಿಂದ ಮಧ್ಯಾಹ್ನ ಭೋಜನಾ ವಿರಾಮದವರೆಗೆ ಭಜನಾ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ ವಿರಾಮದ ಸಮಯದಲ್ಲಿ ಸಪ್ತಸ್ವರ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಸ್ಯಾಕ್ಸೋಪೋನ್ ಕಛೇರಿ ನೆರವೇರಲಿದೆ.
ಪಲಿಮಾರು ಮಠಾಧೀಶರು ಸಹಿತ ಗಣ್ಯರ ಭವ್ಯ ಮೆರವಣಿಗೆಯೊಂದಿಗೆ ಸಂಜೆ 5 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಮಠದ ಮಠಾಧೀಶರುಗಳಾದ ಹಿರಿಯ ಯತಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥಶ್ರೀಗಳು, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅದಾನಿ ಗ್ರೂಪ್ ಕಾರ್ಯನಿರ್ವಾಹಕ ಅಧ್ಯಕ್ಷ ಕಿಶೋರ್ ಆಳ್ವ ಮುಂತಾದ ಗಣ್ಯರು ಭಾಗವಹಿಸಲಿರುವರು.
ಸಾಧಕರಿಗೆ, ಗಣ್ಯರಿಗೆ ಗೌರವ ಸಮ್ಮಾನ ಹಾಗೂ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನೆರವೇರಲಿದೆ. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಗೌರವ ಸಲಹೆಗಾರರಾದ ವಾಸುದೇವ ಆಚಾರ್ಯ ಪಲಿಮಾರು ಮಠ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, ಕೋಶಾಧಿಕಾರಿ ಕರುಣಾಕರ್ ದೇವಾಡಿಗ, ಸಂಘಟನಾ ಕಾರ್ಯದರ್ಶಿ ಲೋಕೇಶ್ ಪಲಿಮಾರು ಉಪಸ್ಥಿತರಿದ್ದರು.

