ಚಂದ್ರಯಾನ 3: ಚಂದ್ರನ ಅಂಗಳದಲ್ಲಿ ರೋವರ್ ಸುತ್ತಾಟ
ಬೆಂಗಳೂರು: ಐತಿಹಾಸಿಕ ಚಂದ್ರಯಾನ 3 ನೌಕೆಯಿಂದ ಪ್ರತ್ಯೇಕಗೊಂಡು ಚಂದ್ರನ ಅಂಗಳದಲ್ಲಿ ಬುಧವಾರ ಸಂಜೆ ಯಶಸ್ವಿಯಾಗಿ ಇಳಿದ ವಿಕ್ರಂ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಇಳಿದು ಚಲಿಸಲು ಆರಂಭಿಸಿದೆ. ಎಲ್ಲವೂ ನಿಗದಿಯಂತೆ ನಡೆಯುತ್ತಿದ್ದು, ಸೂಕ್ಷ್ಮ ಎಲೆಕ್ಟ್ರಾನಿಕ್ ಉಪಕರಣಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ಟ್ವೀಟ್ ಮಾಡಿದೆ.
“ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದಿ ಮ್ಯಾನ್, ದಿ ಸಿ ಎಚ್ 3 ರೋವರ್, ಲ್ಯಾಂಡರ್ ನಿಂದ ಇಳಿದು ಚಂದ್ರನ ಮೇಲೆ ನಡೆದಾಡುತ್ತಿದೆ ಎಂದು ಇಸ್ರೊ ಹೇಳಿದೆ.
ಇದಲ್ಲದೆ ಲ್ಯಾಂಡರ್ ಇಳಿಯುವ ಮುನ್ನ ಅದು ಚಂದ್ರನ ಮೇಲ್ಮೈ ಫೋಟೋ ಸೆರೆ ಹಿಡಿಯುವ ಪ್ರಕ್ರಿಯೆಯ ವಿಡಿಯೋವನ್ನು ಕೂಡ ಇಸ್ರೋ ಅಪ್ಲೋಡ್ ಮಾಡಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರದಿಂದ ಒಟ್ಟು ಹದಿನಾಲ್ಕು ದಿನಗಳ ಕಾಲ ನಡೆದಾಡುವ ರೋವರ್ ನ ಆರು ಚಕ್ರಗಳ ಮೇಲೆ ಭಾರತದ ರಾಷ್ಟ್ರ ಲಾಂಛನ ಹಾಗೂ ಇಸ್ರೋ ಲೋಗೋ ಅಚ್ಛು ಇದ್ದು, ಅದು ಚಲಿಸುವ ಮಾರ್ಗದಲ್ಲೆಲ್ಲ ರಾಷ್ಟ್ರ ಲಾಂಛನ ಹಾಗೂ ಇಸ್ರೊ ಲೋಗೊ ಮೂಡಲಿದೆ. ಇದು ವಿಜ್ಞಾನಿಗಳನ್ನು ಹಾಗೂ ಜನಸಾಮಾನ್ಯರನ್ನು ರೋಮಾಂಚನಗೊಳಿಸಿದೆ.
ಬುಧವಾರ ರಾತ್ರಿ ಲ್ಯಾಂಡರ್ ತಾನು ಇಳಿದ ಜಾಗದ ಫೋಟೋಗಳನ್ನು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೊ ಟ್ರ್ಯಾಕಿಂಗ್ ಕೇಂದ್ರಕ್ಕೆ ಕಳುಹಿಸಿತ್ತು.
ಕರಾರುವಕ್ಕಾದ ಲ್ಯಾಂಡಿಂಗ್
“ವಿಕ್ರಂ ಲ್ಯಾಂಡರ್ ಇಳಿಯಲು ನಾವು ಗುರುತು ಮಾಡಿದ್ದ 4.5 ಕಿಲೋಮೀಟರ್ × 2.5 ಕಿಲೋಮೀಟರ್ ವಿಸ್ತೀರ್ಣದ ಪ್ರದೇಶದ 300 ಮೀಟರ್ ಆಸುಪಾಸಿನಲ್ಲಿಯೇ ಅದು ಇಳಿದಿದೆ. ನಿಗದಿಪಡಿಸಲಾಗಿದ್ದ ಜಾಗದಲ್ಲಿಯೇ ಕರಾರುವಕ್ಕಾಗಿ ಇಳಿಯುವ ಮೂಲಕ ನಮ್ಮ ಎಲ್ಲಾ ಲೆಕ್ಕಚಾರ ಪಕ್ಕಾ ಫಲ ಕೊಟ್ಟಿದೆ.” ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
“ರೋವರ್ ಹಾಗೂ ಲ್ಯಾಂಡರ್ ಗೆ ಅಳವಡಿಸಲಾಗಿರುವ ಹೈಡೆನ್ಸಿಟಿ ಕ್ಯಾಮರಗಳು ಸೇರಿದಂತೆ ಹಲವು ಬಗೆಯ ಎಲೆಕ್ಟ್ರಾನಿಕ್ ಪರಿಕರಗಳು ಕೆಲಸ ಮಾಡುತ್ತಿವೆ. ಚಂದ್ರನ ಮೇಲಿರುವ ವಾತಾವರಣ ಹಾಗೂ ಖನಿಜಾಂಶಗಳ ಕುರಿತು ರೋವರ್ ಅಧ್ಯಯನ ನಡೆಸುತ್ತಿದೆ” ಎಂದು ಸೋಮನಾಥ್ ಹೇಳಿದರು.
ಆದಿತ್ಯ ಎಲ್ 1:
ಸೂರ್ಯನ ಅಧ್ಯಯನ ಕೈಗೊಳ್ಳಲು ಸಪ್ಟೆಂಬರ್ ನಲ್ಲಿ ಆದಿತ್ಯ ಎಲ್ 1 ಉಪಗ್ರಹವನ್ನು ಹಾರಿ ಬಿಡಲಾಗುವುದು. ಈ ನಿಟ್ಟಿನಲ್ಲಿ ಪ್ರಗತಿ ಸಾಗಿದೆ ಎಂದ ಅವರು ಗಗನಯಾನ ಯೋಜನೆಗೂ ಸಕಲ ಸಿದ್ಧತೆಗಳು ನಡೆದಿವೆ ಎಂದರು.

