ಹೆಜಮಾಡಿಯಲ್ಲಿ ‘ಪರಿಕ್ರಮ‘ ಕಾಪು ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಸಾಹಿತ್ಯ ಸಾಮಾಜಿಕ ಸಮಸ್ಯೆಗಳ ಕನ್ನಡಿಯಾಗಬೇಕು : ಫಕೀರ್ ಮಹಮ್ಮದ್
(Hejamady) ಹೆಜಮಾಡಿ: ಸಾಹಿತ್ಯ ಸಾಮಾಜಿಕ ಸಮಸ್ಯೆಗಳ ಸುತ್ತ ಇರುವಂತಹ ಭೀಕರ ಪರಿಣಾಮಗಳತ್ತ ಗಮನ ಸೆಳೆಯುವಂತೆ ಜನರ ಮುಂದೆ ಇಡುವ ಕನ್ನಡಿಯಾಗಬೇಕು. ಜನರನ್ನು ಎಚ್ಚರಿಸಬೇಕು ಇದು ನನ್ನ ಸಾಹಿತ್ಯದ ಗುಣವಾಗಬೇಕು. ಸಾಹಿತ್ಯದಿಂದ ಸಮಾಜ ಸುಧಾರಣೆಯಾಗುತ್ತದೆ ಎಂಬ ಭ್ರಮೆ ಇಲ್ಲ. ಅದು ಸಮಾಜ ಸುಧಾರಕನ ಕೆಲಸ. ಸಾಹಿತ್ಯ ಈ ನಿಟ್ಟಿನಲ್ಲಿ ಹಾದಿಯನ್ನು ತೋರಿಸುವ ಕೆಲಸವನ್ನು ಮಾಡುತ್ತದೆ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೭ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಫಕೀರ್ ಮಹಮ್ಮದ್ ಕಟ್ಪಾಡಿ ಹೇಳಿದರು.
ಅವರು ಹೆಜಮಾಡಿಯ ಬಿಲ್ಲವರ ಸಂಘದ ಸಭಾಭವನದಲ್ಲಿ ಶನಿವಾರ ನಡೆದ ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ‘ಪರಿಕ್ರಮ’ದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ತಮ್ಮ ಸಂಸ್ಕೃತಿ, ನೆಲ, ಜಲ, ವಾತಾವರಣದ ಜತೆಗಿನ ಸಂಪರ್ಕವನ್ನು ಕಡಿದುಕೊಂಡಂತೆ ಕಂಡುಬರುತ್ತಿದೆ. ಪಟ್ಟಣಗಳು ಬೆಳೆಯುತ್ತಿವೆ. ಹಳ್ಳಿ, ಊರು ಬರಡಾಗುತ್ತಿದೆ ಅಥವಾ ಚಿಕ್ಕದಾಗುತ್ತಿವೆ. ಕನ್ನಡ ಭಾಷೆ, ನಾಡು ನುಡಿಗಳನ್ನು ಗಮನಿಸಿದರೆ ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಬಹಳಷ್ಟು ಬದಲಾವಣೆಯಾಗಿದೆ ಎಂದೆನಿಸಿದೆ. ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಕನ್ನಡ ಶಾಲೆಗಳು ತಮ್ಮ ಪ್ರಾತಿನಿಧ್ಯ. ಹಿರಿಮೆ ಗರಿಮೆಗಳನ್ನು ಕಳೆದುಕೊಂಡು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆದು ಕೃತಾರ್ಥಗೊಂಡಿವೆ. ಹಳ್ಳಿಯಲ್ಲಾದರೂ ಕನ್ನಡ ಉಳಿದಿದೆ ಎಂದುಕೊಂಡರೆ, ಇಲ್ಲಿನ ಮಕ್ಕಳು ಇಂಗ್ಲಿಷ್ ಮೀಡಿಯಂನಲ್ಲಿ ಕಲಿತು ‘ಐ ಡೋಂಟ್ ನೋ ಕನ್ನಡ’ ಎನ್ನುತ್ತಿವೆ ಎಂದರು.
ಅವಿಭಜಿತ ದಕ್ಷಿಣ ಕನ್ನಡವನ್ನು ನನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಇಲ್ಲಿನ ಆಗುಹೋಗುಗಳನ್ನು, ಘಟನೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೆ. ಬಾಲ್ಯದಲ್ಲಿ ಕಂಡು ಅನುಭವಿಸಿದ್ದ ಇಲ್ಲಿನ ಸೌಹಾರ್ದಯುತ ವಾತಾವರಣ ಕ್ರಮೇಣ ಶಿಥಿಲಗೊಳ್ಳುತ್ತಾ ಹಿಂಸೆಯಲ್ಲಿ ಮುಳುಗಿಕೊಂಡಿರುವುದನ್ನು ಅವಾಕ್ಕಾಗಿ, ಕಂಡು ದಂಗಾಗಿದ್ದೇನೆ. ಇದಕ್ಕೆ ಕಾರಣವನ್ನು ಅನ್ವೇಶಿಸಿದ್ದೇನೆ. ವ್ಯಾಪಾರದಲ್ಲಿ ಮೂಡಿದ ಕತ್ತುಕೊಯ್ಯುವ ಪೈಪೋಟಿ, ಧರ್ಮಕಾರಣದ ರಾಜಕೀಯ, ಪೂರ್ವಗ್ರಹ ಪೀಡಿತ ಸಮಾಜ ನಿರ್ಮಾಣ ಮುಂತಾದ ಕಾರಣಗಳನ್ನೂ ಕಂಡುಕೊಂಡಿದ್ದೇನೆ. ಇದರ ಕೊನೆಯಿಲ್ಲದ ಬೆಳವಣಿಗೆ ‘ದಜ್ಜಾಲ’ನ ರೂಪ ಧರಿಸಿದ್ದು ಕಂಡು ಭಯಭೀತನಾಗಿದ್ದೇನೆ. ಇದಕ್ಕೆ ಕೊನೆ ಎಂದು? ಪ್ರಶ್ನೆಗಳು ಹಲವಾರು ಇವೆ. ಉತ್ತರ ಮಾತ್ರ ಹುಡುಕಬೇಕಿದೆ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ನಮ್ಮ ಮಕ್ಕಳನ್ನು ಸಾಮಾಜಿಕ ಜಾಲತಾಣಗಳಿಂದ ಹೊರ ತಂದು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಪ್ರಯತ್ನಗಳಾಗಬೇಕು. ಬದುಕಿಗೆ ಹೇಳಲಾರದಷ್ಟು ವ್ಯಾಖ್ಯಾನಗಳಿವೆ. ಶಾಸ್ತ್ರ ಮಾಹಿತಿ ಕೊಡುತ್ತದೆ. ಅದರ ಜತೆ ನಮ್ಮ ಮಾತು, ಕೃತಿಗಳು ಜತೆಯಾದಾಗ ಸಾಹಿತ್ಯ ಹೊರಹೊಮ್ಮುತ್ತದೆ. ಈ ದೇಶದ ಉನ್ನತಿಗೆ ಭಾಷೆ ಪೂರಕವಾಗಿರಬೇಕು ಎಂದರು.
ಮಾಜಿ ರಾಜ್ಯ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು, ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಹೆಜಮಾಡಿ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ, ಅಲ್ ಅಝ್‌ಹರ್ ಶಾಲಾ ಸಂಚಾಲಕ ಶೇಖಬ್ಬ ಕೋಟೆ, ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಶ್ಮಾ ಮೆಂಡನ್, ಉದ್ಯಮಿ ರಾಲ್ಫಿ ಡಿಕೋಸ್ಟ, ನಿವೃತ್ತ ಅಧಿಕಾರಿ ರಾಜು ಮತ್ತಿತರರಿದ್ದರು.
ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಹೆಜಮಾಡಿ ಸ್ವಾಗತಿಸಿದರು.
ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ ಅವರು ಪ್ರಸ್ತಾವಿಸಿದರು.
ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿಗಳನ್ನಾಡಿದರು.
ದೀಪಕ್ ಬೀರ ಅವರು ಸಮ್ಮೇಳನಾಧ್ಯಕ್ಷರ ಪರಿಚಯ ಗೈದರು.
ಪ್ರೊ. ವಿದ್ಯಾ ಅಮ್ಮಣ್ಣಾಯ ಹಾಗೂ ನಿವೃತ್ತ ಪ್ರಾಂಶುಪಾಲ ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರ್ವಹಿಸಿದರು. ಸಮ್ಮೇಳನ ಕಾರ್ಯದರ್ಶಿ ಪ್ರಾಣೇಶ್ ಹೆಜಮಾಡಿ ಸ್ವಾಗತಿಸಿದರು. ಪವಿತ್ರಾ ಗಿರೀಶ್ ವಂದಿಸಿದರು.
ಸಭೆಯ ಆರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಫಕೀರ್ ಮಹಮ್ಮದ್ ಕಟ್ಪಾಡಿ ಹಾಗೂ ಕನ್ನಡ ಮಾತೆ ಭುವನೇಶ್ವರಿ ದೇವಿಯ ಶೋಭಾ ಯಾತ್ರೆ ನಡೆಯಿತು.
ಹೆಜಮಾಡಿ ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಶ್ಮಾ ಮೆಂಡನ್ ರಾಷ್ಟ್ರ ಧ್ವಜಾರೋಹಣ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.
ಸಮ್ಮೇಳನದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

