ಹೆಜಮಾಡಿ: ಕಾಪು ಪತ್ರಕರ್ತರ ಸಂಘದ ಆಯೋಜನೆಯಲ್ಲಿ ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಸಂಸ್ಮರಣೆ, ದತ್ತಿ ನಿಧಿ ವಿತರಣೆ
ಸಮಾಜದ ಭ್ರಷ್ಟಾಚಾರ ನಿರ್ಮೂಲನೆ ಪತ್ರಿಕಾ ರಂಗದಿಂದ ಸಾಧ್ಯ: ವೈ.ಎನ್. ಶೆಟ್ಟಿ
(Hejamady) ಹೆಜಮಾಡಿ: ಸಮಾಜದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ನಮ್ಮ ಶಾಸಕಾಂಗದಲ್ಲಿ ಕೊರತೆ ಇದೆ. ಕಾರ್ಯಂಗದಲ್ಲೂ ಕೊರತೆ ಎದ್ದು ಕಾಣುತ್ತಿದೆ. ಇದನ್ನೆಲ್ಲಾ ನಿಯಂತ್ರಣ ಮಾಡಲು ಪತ್ರಿಕಾರಂಗದಿಂದ ಮಾತ್ರ ಸಾಧ್ಯ. ಮಾದ್ಯಮಗಳಿಂದ ಅಭಿಪ್ರಾಯ ಹೊರ ಬಂದಾಗ ತಪ್ಪಿತಸ್ಥರಿಗೆ ಕಂಪನ ಆರಂಭವಾಗುತ್ತದೆ ಎಂದು ಜಾನಪದ ಚಿಂತಕ ಡಾ.ವೈ.ಎನ್. ಶೆಟ್ಟಿ ಹೇಳಿದ್ದಾರೆ.
ಅವರು ಹೆಜಮಾಡಿ ಸರಕಾರಿ ಜೂನಿಯರ್ ಕಾಲೇಜು ಮತ್ತು ಪ್ರೌಢ ಶಾಲೆಯಲ್ಲಿ ಕಾಪು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಪತ್ರಿಕಾ ದಿನಚರಣೆ ಹಾಗೂ ಅಗಲಿದ ಪತ್ರಕರ್ತ ದಿ.ಜಯಂತ್ ಪಡುಬಿದ್ರಿ ಇವರ ಸ್ಮರಣಾರ್ಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡ ಮಾಡುವ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದರು.
ಮಾದ್ಯಮಗಳ ಜವಾಬ್ದಾರಿ ದೊಡ್ಡದು. ವಸ್ತುನಿಷ್ಠ, ದಕ್ಷ ಪ್ರಾಮಾಣಿಕ ವರದಿಗಳು ಸಮಾಜವನ್ನು ನಿಯಂತ್ರಿಸಿ ಸದೃಢಗೊಳಿಸಲು ಸಾಧ್ಯ ಎಂದೂ ಡಾ.ವೈ.ಎನ್. ಶೆಟ್ಟಿ ಹೇಳಿದರು.
ಪತ್ರಕರ್ತ ರಾಕೇಶ್ ಕುಂಜೂರುರವರು ಪತ್ರಿಕಾ ರಂಗದ ಆಗು – ಹೋಗುಗಳ ಬಗ್ಗೆ ಉಪನ್ಯಾಸ ನೀಡಿದರು.
ಅಗಲಿದ ಪತ್ರಕರ್ತ ಜಯಂತ್ ಪಡುಬಿದ್ರಿಯವರ ಬಾವಚಿತ್ರಕ್ಕೆ ಅತಿಥಿಗಳು ಪುಷ್ಪ ನಮನ ಸಲ್ಲಿಸಿದರು.
ಶಾಲಾ ಗ್ರಂಥಾಲಯಕ್ಕೆ ಪತ್ರಕರ್ತ ಸಂಘದ ವತಿಯಿಂದ ಪುಸ್ತಕಗಳನ್ನು ಪ್ರಭಾರ ಮುಖ್ಯ ಶಿಕ್ಷಕಿ ಸಂಪಾವತಿಯವರಿಗೆ ಪತ್ರಕರ್ತ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಹಸ್ತಾಂತರಿಸಿದರು.
ವಿದ್ಯಾರ್ಥಿಗಳಿಗೆ ೫ ವಿವಿಧ ದಿನ ಪತ್ರಿಕೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಜಿಲ್ಲಾ ಪತ್ರಕರ್ತ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಪ್ರ. ಕಾರ್ಯದರ್ಶಿ ನಝೀರ್ ಪೊಲ್ಯ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸಂಪಾವತಿ, ಕಾಪು ಕಾರ್ಯನಿರತ ಪತ್ರರ್ತರ ಸಂಘದ ಕಾರ್ಯದರ್ಶಿ ಸಂತೋಷ್ ನಾಯ್ಕ್, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ ಉಪಸ್ಥಿತರಿದ್ದರು.
ಅಧ್ಯಕ್ಷ ಹರೀಶ್ ಹೆಜಮಾಡಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ವಿಜಯ ಆಚಾರ್ಯ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್ ಕಾಪು ವಂದಿಸಿದರು.

