ಜುಲೈ 14,15,16 : ಕರಾವಳಿಯಲ್ಲಿ ಸೌಹಾರ್ಧದ ಮರುಸ್ಥಾಪನೆಗಾಗಿ ಎಸ್‌ವೈಎಸ್ ನಿಂದ ಸೌಹಾರ್ದ ಸಂಚಾರ ಜಾಥಾ
(Kaup) ಕಾಪು: ಇತ್ತೀಚೆಗೆ ಕರಾವಳಿ ಪ್ರದೇಶಗಳಲ್ಲಿ ಅತಿಯಾಗಿ ಮನುಷ್ಯರ ನಡುವೆ ದ್ವೇಷದ ವಿಷ ಬೀಜ ಬಿತ್ತಿ ಪರಸ್ಪರ ಹಗೆತನ, ಕೊಲೆಗಳ ಮೂಲಕ ನಾಡಿನ ಸೌಹಾರ್ದತೆಯನ್ನು ಹಾಳುಗೆಡವಲಾಗುತ್ತಿದೆ. ಈ ಸಂದರ್ಭದಲ್ಲಿ ನಾಡಿನ ಭಾವೈಕ್ಯತೆಯ ಪರಂಪರೆಯನ್ನು ಎತ್ತಿ ಹಿಡಿದು, ಸೌಹಾರ್ದತೆಯ ಸಂದೇಶವನ್ನು ಸಾರಲು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ಆಯೋಜನೆಯಲ್ಲಿ ಜುಲೈ 14, 15, 16 ವರೆಗೆ ಕುಂದಾಪುರದಿಂದ ಸುಳ್ಯ ತನಕ “ಸೌಹಾರ್ದ ಸಂಚಾರ” ಎಂಬ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘದ ಜನರಲ್ ಕನ್ವೀನರ್ ಎಂ.ಕೆ ಇಬ್ರಾಹಿಂ ಮಜೂರು ಹೇಳಿದರು.
ಅವರು ಶನಿವಾರ ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ಅತಿಯಾಗಿ ಮನುಷ್ಯರೆಡೆಯಲ್ಲಿ ದ್ವೇಷದ ವಿಷ ಬೀಜ ಬಿತ್ತಿ ಪರಸ್ಪರ ಹಗೆತನ, ಕೊಲೆಗಳ ಮೂಲಕ ನಾಡಿನ ಸೌಹಾರ್ದತೆಯನ್ನು ಹಾಳುಗೆಡವಲಾಗುತ್ತಿದೆ. ಈ ಸಂದರ್ಭದಲ್ಲಿ ನಾಡಿನ ಭಾವೈಕ್ಯತೆಯ ಪರಂಪರೆಯನ್ನು ಎತ್ತಿ ಹಿಡಿದು ಸೌಹಾರ್ದತೆಯ ಸಂದೇಶವನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ.
ಜಾತಿ ಮತ ಪಥಗಳು ಭಿನ್ನವಾದರೂ ಎಲ್ಲರನ್ನೂ ಮನುಷ್ಯರನ್ನಾಗಿ ಕಾಣುವ ಹೃದಯವಂತಿಕೆ ಬಹಳ ಮುಖ್ಯ. ಒಬ್ಬರನ್ನೊಬ್ಬರು ಅರಿತು, ಬೆರೆತು ಬದುಕಿದರೆ ಮಾತ್ರ ಸ್ವಸ್ಥ ಜೀವನ ಸಾಧ್ಯ. ಈ ಸಂದೇಶವನ್ನು ಸಮಾಜದ ಮುಂದೆ ಪ್ರಬಲವಾಗಿ ಪ್ರತಿಪಾದಿಸುವ ಸಲುವಾಗಿ ‘ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ’ (ಎಸ್ ವೈ ಎಸ್)ವು ವಿಶಿಷ್ಟ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದ ಬಾಂದವರು ಸೇರಿಕೊಳ್ಳುತ್ತಾರೆ.
ಜುಲೈ 14 ಸೋಮವಾರ ಕಾಪು ಪೊಲಿಪು ಮಸೀದಿ ಮುಂಭಾಗದ ಜಂಕ್ಷನ್ ನಿಂದ ಕಾಪು ಪೇಟೆಯವರೆಗೆ ಸೌಹಾರ್ದ ಕಾಲ್ನಡಿಗೆ ಜಾಥಾ ಹಾಗೂ ಕಾಪು ಪೇಟೆಯಲ್ಲಿ ಸೌಹಾರ್ದ ಸಂದೇಶ ಭಾಷಣ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು, ಸರ್ವ ಧರ್ಮಿಯ ವಿವಿಧ ಧಾರ್ಮಿಕ ಕ್ಷೇತ್ರದ ಪ್ರಮುಖರು ಹಾಗೂ ಶೈಕ್ಷಣಿಕ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳ ಮುಂದಾಳುಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸ್ವಾಗತ ಸಮಿತಿ ಚಯರ್ ಮ್ಯಾನ್ ಅಬ್ದುಲ್ ಹಾಜಿ ಮೂಳೂರು, ಎಂ.ಕೆ ಇಬ್ರಾಹಿಂ ಮಜೂರು, ಹನೀಫ್ ಹಾಜಿ ಕನ್ನಂಗಾರ್, ಟಿ. ಪಿ ಬಶೀರ್ ಮುಸ್ಲಿಯಾರ್, ಎಂ.ಕೆ ಸಯ್ಯದ್ ಆಲಿ ಉಪಸ್ಥಿತರಿದ್ದರು.

