ಹೊಸತನಕ್ಕೆ ಸಾಕ್ಷಿಯಾದ ಪಾವಂಜೆ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ
ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದ ಕಲಾವಿದರಿಗೆ ಇ.ಎಸ್.ಐ ಮತ್ತು ಭವಿಷ್ಯನಿಧಿ ಸವಲತ್ತು
(Mulki) ಮೂಲ್ಕಿ: ಆರು ವರ್ಷಗಳನ್ನುಪೂರ್ಣಗೊಳಿಸಿರುವ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆಯ ಕಲಾವಿದರಿಗೆ ದೇವಳದ ಆಡಳಿತ ಮಂಡಳಿ ವತಿಯಿಂದ ಯಕ್ಷರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇ.ಎಸ್.ಐ ಮತ್ತು ಭವಿಷ್ಯನಿಧಿ ಸವಲತ್ತು ನೀಡುವ ಮೂಲಕ ಯಕ್ಷರಂಗದಲ್ಲಿ ಹೊಸ ವ್ಯವಸ್ಥೆಗೆ ಸಾಕ್ಷಿಯಾಗಿದ್ದು, ಕಲಾವಿದರಿಗೆ ಈಗ ಮತ್ತಷ್ಟು ಆರೋಗ್ಯ ಭದ್ರತೆ ದೊರಕಿದಂತಾಗಿದೆ.
ಮೇಳದಲ್ಲಿ ಮುಮ್ಮೇಳ, ಹಿಮ್ಮೇಳ ಮತ್ತು ಸಹಾಯಕರು ಸೇರಿ ಒಟ್ಟು 52 ಕಲಾವಿದರಿದ್ದು, ಈ ಎಲ್ಲಾ ಕಲಾವಿದರು ಹೊಸ ವ್ಯವಸ್ಥೆ ಅಡಿಯಲ್ಲಿ ಬರುತ್ತಿದ್ದಾರೆ. ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಸಮರ್ಥ ಕಲಾವಿದರ ತಂಡ ಇದಾಗಿದ್ದು, ಕೇವಲ ಆರು ವರ್ಷದಲ್ಲಿ ಈ ವ್ಯವಸ್ಥೆ ಕಲ್ಪಿಸಿರುವುದು ಅಭಿನಂದನೀಯವಾಗಿದೆ.
ಪ್ರಾರಂಭದಿಂದಲೂ ದೇವಳದ ಆಡಳಿತ ಮಂಡಳಿ ಕಲಾವಿದರಿಗೆ ವಿಶೇಷ ಸವಲತ್ತು ನೀಡುತ್ತಿದ್ದು, ಕಲಾವಿದರ ಶ್ರೇಯಸ್ಸಿಗಾಗಿ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಇದರ ಜೊತೆ ಯಕ್ಷಗಾನದಿಂದ ಹಿಮ್ಮುಖವಾಗುತ್ತಿದ್ದ ಯುವ ಕಲಾಭಿಮಾನಿಗಳನ್ನು ಮತ್ತೆ ಯಕ್ಷಗಾನದತ್ತ ಸೆಳೆದ, ಪಾವಂಜೆ ಮೇಳದ ಸಾರಥ್ಯ ವಹಿಸಿರುವ ಪಟ್ಲ ಭಾಗವತರ ಯಕ್ಷ ಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಕೂಡ ಕಲಾವಿದರಿಗೆ ಸಹಕಾರ ನೀಡಲಾಗುತ್ತಿದೆ. ಪಟ್ಲ ಫಂಡೇಶನ್ ಸಾವಿರಾರು ಯಕ್ಷಗಾನ, ನಾಟಕ, ದೈವಾರಾಧನೆ ಕಲಾವಿದರಿಗೆ ವಿವಿಧ ರೀತಿಯ ವಿಮೆಯ ವ್ಯವಸ್ಥೆ ಮಾಡಿದ್ದು, ಇದರ ಸೌಲಭ್ಯ ಕೂಡ ಪಾವಂಜೆ ಮೇಳದ ಕಲಾವಿದರಿಗೆ ಸಿಗಲಿದೆ.
ಒಟ್ಟಿನಲ್ಲಿ ಪಾವಂಜೆ ಜ್ಞಾನಶಕ್ತಿ ಶ್ರೀ ಸುಬ್ರಮಣ್ಯ ಸ್ವಾಮಿ ದೇವಳ ಹೊಸತನಕ್ಕೆ ಸಾಕ್ಷಿಯಾಗಿದೆ

