ಎನಿದು ? ಪ್ರಕೃತಿ ಮುನಿದಳೇ? ಪ್ರಕೃತಿಯೋ ವಿಕೃತಿಯೋ
ಉಡುಪಿಯ ಡಾ. ಎ ಪಿ ಭಟ್ ವಿಶೇಷ ಲೇಖನ
(Udupi) ಉಡುಪಿ: ಎಲ್ಲಿ ಕಂಡರೂ ಭೂಕಂಪ, ಜ್ವಾಲಮುಖಿಗಳು. ಚಂಡ ಮಾರುತಗಳು. ಅತಿವೃಷ್ಟಿ ಅಂತೆನುವಷ್ಟು ಮಳೆ, ಅದರಲ್ಲೂ ಎಲ್ಲಾ ಕಡೆ ಮೇಘಸ್ಫೋಟ. ಎನಿದು ? ಪ್ರಕೃತಿ ಮುನಿದಳೇ?
ಸೂರ್ಯನ ಕಥೆಯೇ ಬೇರೆ. 25ನೇ ಆವೃತ್ತಿಯ 11ವರ್ಷದ ಸೂರ್ಯನ ಕುಣಿತ “ಸನ್ ಸ್ಫಾಟ್ ಸೈಕಲ್“ ವಿಜ್ಞಾನಿಗಳ ಲೆಕ್ಕಾಚಾರಗಳನ್ನು ಮೀರಿ ಮುಂದುವರಿಯುತ್ತಿದೆ. ಈ ವರ್ಷದ ಜನವರಿಗೆ ಮುಗಿಯುತ್ತದೆ ಎಂದು ತಿಳಿದಿದ್ದರು. ಆದರೆ ಈಗ ಇನ್ನೂ ಬೃಹತ್ ಸೌರ ಜ್ವಾಲೆಗಳ ಉತ್ಸರ್ಜನೆ, ಹೆಚ್ಚುತ್ತಾ, ಹೆಚ್ಚುತ್ತಾ ನೂರುವರ್ಷದಲ್ಲಿ ಕಾಣದ ಶಕ್ತಿಯುತ ಸೌರ ಜ್ವಾಲೆಗಳು (ಕಾಸ್ಮಿಕ್ ಮಾಸ್ ಇಜೆಕ್ಷನ್) ಸಿಡಿಯುತ್ತಲೇ ಇವೆ.
ಸೂರ್ಯನ ಈ ವಿಪರೀತ ನರ್ತನಕ್ಕೂ ಭೂಮಿಯಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪಕ್ಕೂ ಸಂಬಂಧವಿದೆಯೇ?
ಹೌದು ಎನ್ನುತ್ತಿದ್ದಾರೆ ವಿಜ್ಞಾನಿಗಳು. ಇಂದು ಕಾರ್ತೀಕದ ದೀಪೋತ್ಸವದ ಕಾಲದಲ್ಲಿ ದಕ್ಷಿಣ ಭಾರತದ ಇಕ್ಕೆಲೆಗಳಲ್ಲಿ ಎರಡೆರಡು ಚಂಡ ಮಾರುತಗಳು. ಬಂಗಾಳ ಕೊಲ್ಲಿಯಲ್ಲಿ ಹಾಗೂ ಹಿಂದೂ ಮಹಾಸಾಗರದಿಂದ ಹೊರಟು ಭಾರತದ ಪಶ್ಚಿಮ ಕರಾವಳಿಯಲ್ಲಿ ದೀಪಾವಳಿ ಹಬ್ಬದ ನೆಲಚಕ್ರ ಸುರು ಸುರು ಸುತ್ತುವಂತೆ ತಿರುಗುತ್ತಾ ಸಾಗುತ್ತಿವೆ. ಬಂಗಾಳ ಕೊಲ್ಲಿಯಲ್ಲಿ ಈ ಸಮಯದಲ್ಲಿ ನಡೆಯುವುದು ಮಾಮೂಲಿ ಚಂಡ ಮಾರತವಿದ್ದರೂ, ಅರಬೀ ಸಮುದ್ರದ ಚಂಡಮಾರುತ ಆಶ್ಚರ್ಯ.
ಈಗ ಇದು ಪ್ರತೀ ವರ್ಷ ಸರ್ವೇ ಸಾಮಾನ್ಯವಾಗುತ್ತಿವೆ. ಒಂದು ಕಾಲದಲ್ಲಿ ಪರಶುರಾಮ ಸೃಷ್ಟಿಯ ಪಶ್ಚಿಮ ಕರಾವಳಿ ತೀರದಲ್ಲಿ ಚಂಡಮಾರುತ ಏಳುವುದಿಲ್ಲ ಅಂತಿತ್ತು. ಆದರೆ ಈಗೀಗ ಎಲ್ಲವೂ ತಲೆಕೆಳಗಾಗಿದೆ. ಅದೇನು ಅದೃಷ್ಟವೋ ಪಶ್ಚಿಮ ಕರಾವಳಿ ತೀರದವರದು. ಪಶ್ಚಿಮ ಘಟ್ಟ, ಪಶ್ಚಿಮ ಸಮುದ್ರದಿಂದ ಬರುವ ಚಂಡಮಾರುತವನ್ನು ಒಳ ಬರಬಿಡದೇ ಉತ್ತರದ ಮುಂಬಯಿ ಹಾಗೂ ಗುಜರಾತಿಗೆ ರಾಚಿಸುತ್ತಿದೆ.
ರಿಂಗ್ ಆಫ್ ಫಯರ್ : ಆಸ್ಟ್ಲೇಲಿಯಾ ಪೂರ್ವ ಕರಾವಳಿಂದ ಪ್ರಾರಂಭಿಸಿ ಜಪಾನ್, ಚೈನಾ ಮೇಲಿಂದ ರಷ್ಯ ಸವರಿಕೊಂಡು ಅಲಾಸ್ಕಾದ ಮೂಲಕ ಕೆನೆಡಾ ಹಾಗೂ ದಕ್ಷಿಣ ಅಮೇರಿಕಾದ ಪಶ್ಚಿಮ ಭಾಗದವರೆಗೆ ಅಬ್ಬಾ ಅದೆಷ್ಟು ಭೂಕಂಪನಗಳು ಈ ವರ್ಷ. ಈ ಪಥವನ್ನು “ರಿಂಗ್ ಆಫ್ ಫಯರ್“ ಎನ್ನುವರು.
ಇದೊಂದು ತೇಲುವ ಸುಮಾರು 50 ಕಿಮೀ ದಪ್ಪದ ಭೂ ಮೇಲ್ಪದರದ ಪ್ಲೇಟ್. ಪ್ಲೇಟ್ ಟೆಕ್ಟೋನಿಕ್ಸ್. ಹೀಗೆ ಅನೇಕ ಪ್ಲೇಟ್‌ಗಳಿಂದ ಭೂಮಿ ಆವೃತವಾಗಿದೆ. ಈ ತೇಲುವ ಪ್ಲೇಟ್ ಗಳು ತಾಗಿ ಘರ್ಷಣೆಯಾದಾಗ ಭೂಮಿ ಆ ಸ್ಥಳದಲ್ಲಿ ಕಂಪಿಸುತ್ತದೆ. ಕಂಪನದಿಂದ ಚಿಮ್ಮುವ ಪ್ಲಾಸ್ಮಾದ ಜ್ವಾಲಾಮುಖಿ. ದಶ ದಿಶೆಗೆ ಹಾರುವ ಶಕ್ತಿಯುತ ಕಣಗಳ ಪ್ರವಾಹ. ಈ ಪದರಗಳ ಕಂಪನದ ಘರ್ಷಣೆ ಸಮುದ್ರದಲ್ಲಿ ಆದರೆ ಸುನಾಮಿ ಸೃಷ್ಟಿ.
ಭೂಮಿಯಲ್ಲಿ ನಡೆಯುತ್ತಿರುವ ಈ ಕ್ರಿಯೆಗಳಿಗೂ ಸೂರ್ಯನ ಕಲೆಗಳ ಆವರ್ತಕ್ಕೂ ಸಂಬಂಧವಿರಬಹುದೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸೂರ್ಯನ ಕಲೆಗಳು ಹೆಚ್ಚಿದ್ದಾಗ ಭೂ ಕಂಪನಗಳೂ ಹೆಚ್ಚು. ಸದ್ಯ ಈಗ ಅದು ತೀವ್ರತರವಾಗಿ ನಡೆಯುತ್ತಿದೆ.
ಇದೇನಿದು ಕಂಡಕಂಡಲ್ಲಿ ಮೇಘಸ್ಫೋಟ:
ಹಿಮಾಲಯ ತಪ್ಪಲಲ್ಲಿ ಮೇಘಸ್ಫೋಟ ಆಗಾಗ ಕೇಳಿ ಬರುತ್ತಿತ್ತು. ಈಗ ದಕ್ಷಿಣ ಭಾರತದಲ್ಲೂ ಅಲ್ಲಲ್ಲಿ ಮೇಘ ಸ್ಫೋಟ ಕಂಡುಬರುತ್ತಿದೆ. ಕುಶಾಲ ನಗರದಲ್ಲಿ ಮಳೆ ಇಲ್ಲ, ಶಿರಾಡಿ ಘಾಟಿ ಕೆಳಗೂ ಮಳೆ ಇಲ್ಲ. ಘಾಟಿಯ ಮಧ್ಯದಲ್ಲಿ ಧಾರಾಕಾರ ಛಡಿಮಳೆ, ರಸ್ತೆಯಲ್ಲಿ ನೆರೆ. ಬರೇ 5 ಕಿಮೀ ಆಚೆ ಈಚೆ ಎಲ್ಲೂ ಮಳೆ ಇರುವುದಿಲ್ಲ ಮಧ್ಯದಲ್ಲಿ ನೀರೇ ನೀರು. ಧಾರಾಕಾರ ಮಳೆ. ಈ ಮೇಘಸ್ಫೋಟಗಳಿಗೆ ಕಾರಣ ಆಶ್ಚರ್ಯ, ಈಗ ಅಲ್ಲಲ್ಲಿ ನಡೆಯುತ್ತಿರುವ ಜ್ವಾಲಾಮುಖಿಗಳು, ಅವುಗಳಿಂದ ಚಿಮ್ಮಿದ ಕಣಗಳ ಪ್ರವಾಹ. ಅವು ಸಾವಿರ ಸಾವಿರ ಕಿಮೀ ದೂರದಲ್ಲೂ ಗುಂಪು ಗುಂಪಾಗಿದ್ದಲ್ಲಿ ಅಲ್ಲೇ ಮೋಡ ಕೇಂದ್ರೀಕರಿಸಿ ಮೇಘ ಸ್ಫೋಟ ಎರ್ಪಡಿಸುತ್ತಿವೆ.
ಈ ಎಲ್ಲ ಪೃಕೃತಿಯ ಕುಣಿತದಲ್ಲಿ ಸೂತ್ರಧಾರ ಸೂರ್ಯ, ನಟ ನಮ್ಮ ಭೂಮಿ.
“ನಮಸವಿತ್ರೇ ಜಗದೇಕ ಚಕ್ಷುಶೇ, ಜಗತ್ ಪ್ರಸೂತಿ ಸ್ಥಿತಿ ನಾಶ ಹೇತವೇ.
ಏ ಸೂರ್ಯದೇವ , ನಮ್ಮ ಮೇಲೆ ಕರುಣೆ ಇರಲಿ ತಂದೆ.

