ನೂತನ ತರಕಾರಿ ಮಾರುಕಟ್ಟೆ ಹೆಸರಲ್ಲಿ ಅದಾನಿಯ 17 ಲಕ್ಷ ಪೋಲು ಮಾಡಿದ ಬಡಾ ಗ್ರಾ. ಪಂ.
ಗ್ರಾಮಕ್ಕೆ ಅಗತ್ಯವಾದ ಮೀನು ಮಾರುಕಟ್ಟೆಗಿಲ್ಲ ಭಾಗ್ಯ
(Uchila) ಉಚ್ಚಿಲ : ಅದಾನಿ ಪವರ್ ಪ್ರಾಜೆಕ್ಟ್ ಕಂಪನಿಯ ಅದಾನಿ ಫೌಂಡೇಶನ್ ವತಿಯಿಂದ ಉಚ್ಚಿಲ ಬಡಾ ಗ್ರಾ.ಪಂ. ವ್ಯಾಪ್ತಿಯ ವಾರದ ಸಂತೆ ಮಾರುಕಟ್ಟೆಯ ಬಳಿ ತರಕಾರಿ ಮಾರುಕಟ್ಟೆ ನಿರ್ಮಿಸಿದ್ದು, ಗ್ರಾಮಕ್ಕೆ ಅಗತ್ಯ ಇರುವ ಮೀನು ಮಾರುಕಟ್ಟೆ ನಿರ್ಮಿಸದೆ, ಗ್ರಾಮ ಪಂಚಾಯತಿಯ ತಪ್ಪು ನಿರ್ಣಯದಿಂದಾಗಿ ಅದಾನಿ ಫಂಡೇಶನ್ ಸಂಸ್ಥೆಯ 17 ಲಕ್ಷ ರೂ. ಸಿಎಸ್ ಆರ್ ಅನುದಾನವನ್ನು ಪೋಲು ಮಾಡಿದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ವ್ಯವಸ್ಥಿತ ಮೀನು ಮಾರುಕಟ್ಟೆ ಅಸ್ತಿತ್ವದಲ್ಲಿತ್ತು
ಈಗ ನಿರ್ಮಿಸಲಾದ ಜಾಗದ ಪಕ್ಕದಲ್ಲಿ ವ್ಯವಸ್ಥಿತ ಮೀನು ಮಾರುಕಟ್ಟೆ ಅಸ್ತಿತ್ವದಲ್ಲಿತ್ತು. ಮೀನು ಮಾರಾಟಗಾರರು ಅಲ್ಲಿ ಮೀನು ಮಾರಾಟ ಮಾಡುತ್ತಿಲ್ಲ ಎಂದು, ಆ ಮಾರುಕಟ್ಟೆಯನ್ನು ಖಾಸಗಿಯವರಿಗೆ ಗೋದಾಮು ನಿರ್ಮಿಸಲು ಬಾಡಿಗೆಗೆ ಕೊಡಲಾಗಿತ್ತು. ನಂತರದ ದಿನದಲ್ಲಿ ಆ ಜಾಗವನ್ನು ಗ್ರಾಪಂ ವಾಪಾಸು ಪಡೆದು ಅದರಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಮಾಡಲಾಗಿತ್ತು. ಬೆಂಕಿ ಅವಘಡದಿಂದ ಅದು ಉರಿದು ಹೋದ ನಂತರ ತಾತ್ಕಾಲಿಕವಾಗಿ ತ್ಯಾಜ್ಯ ಸಂಗ್ರಹಣಾ ಘಟಕ ಮಾಡಲಾಗಿದೆ.
ಮೀನುಗಾರರು ಮೀನು ಮಾರುಕಟ್ಟೆಗಾಗಿ ಗ್ರಾಮ ಪಂಚಾಯತ್ ನಲ್ಲಿ ಬೇಡಿಕೆ ಇಟ್ಟಾಗ ಗ್ರಾಮ ಪಂಚಾಯತ್ ಹೆದ್ದಾರಿಯ ಜಾಗದಲ್ಲಿ ಮೂರ್ನಾಲ್ಕು ಲಕ್ಷ ರೂ. ಖರ್ಚು ಮಾಡಿ ಮೀನು ಮಾರುಕಟ್ಟೆ ಮಾಡಿತ್ತು. ಹೆದ್ದಾರಿ ಅಗಲೀಕರಣದ ಸಂದರ್ಭ ಆ ಮಾರುಕಟ್ಟೆಯನ್ನು ಹೆದ್ದಾರಿ ಇಲಾಖೆ ಧರೆಗೆ ಉರುಳಿಸಿದೆ. ಇದರಲ್ಲಿ ಗ್ರಾಮಸ್ಥರ ಹಣ ಪೋಲಾಗಿದ್ದು ಸುಳ್ಳಲ್ಲ.
ಸಮರ್ಪಕ ಮೀನು ಮಾರುಕಟ್ಟೆ ಇಲ್ಲದೆ ಮೀನು ಮಾರಾಟಗಾರರು ರಸ್ತೆ ಪಕ್ಕ ಮೀನು ಮಾರಾಟ ಮಾಡುವುದು ಅನಿವಾರ್ಯ ಆಗಿದೆ.
ಮೀನು ಮಾರುಟ್ಟೆಯ ಅವಶ್ಯಕತೆ ಮನಗಂಡಿದ್ದ ಬಡಾ ಗ್ರಾಮ ಪಂಚಾಯತ್
ಮೀನು ಮಾರುಟ್ಟೆಯ ಅವಶ್ಯಕತೆಯನ್ನು ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ಮನಗಂಡಿದ್ದರೂ, ಮೀನು ಮಾರುಕಟ್ಟೆಗೆ ಬೇಡಿಕೆ ಇಡದೆ, ತಮಗೆ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡುವಂತೆ ಅದಾನಿ ಕಂಪನಿಯಲ್ಲಿ ಮನವಿ ಮಾಡಿಕೊಂಡಿತ್ತು. ಅದಾನಿ ಫೌಂಡೇಶ್ ನವರು 17 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಿ ಕೆಲದಿನಗಳ ಹಿಂದೆ ಬಡಾ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿದ್ದಾರೆ.
ಗ್ರಾ. ಪಂ.ನಿಂದ ತಪ್ಪು ಮಾಹಿತಿ, ಅದಾನಿ ಹಣ ಪೋಲು :
ಅದಾನಿ ಫೌಂಡೇಶನ್ ತಮ್ಮ ಸಿ ಎಸ್ ಆರ್ ಫಂಡಿನಿಂದ ಮಾರುಕಟ್ಟೆ ನಿರ್ಮಾಣಕ್ಕೆ ಟೆಂಡರ್ ಕರೆದು ಮಾರುಕಟ್ಟೆ ನಿರ್ಮಿಸಿದ್ದು ಸಂತಸದ ವಿಷಯ. ಆದರೆ ಗ್ರಾ.ಪಂ. ಪಿಡಿಒ ಅಥವಾ ಗ್ರಾ.ಪಂ.ಆಡಳಿತ ಮಂಡಳಿಯು ತಮಗೆ ಈಗ ಅಗತ್ಯವಾಗಿದ್ದು ಮೀನು ಮಾರುಕಟ್ಟೆ ಎನ್ನುವುದನ್ನೇ ಮರೆತಂತಿದೆ.
ಮೀನುಗಾರ ಸಮಾಜದ ಅಧ್ಯಕ್ಷನಾದ ಶಿವಕುಮಾರ್ ಮೆಂಡನ್ ಮೊದಲಿಗೆ ಮೀನು ಮಾರುಕಟ್ಟೆಗೆ ಮುಂದಡಿ ಇಡಬೇಕಿತ್ತು. ಮಾರುಕಟ್ಟೆ ಇಲ್ಲದೆ ಮೀನು ಮಾರಾಟಗಾರರು ಭಾಸ್ಕರ್ ನಗರ ತಿರುವಿನಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆಯ ಜೊತೆಗೆ ಅಲ್ಲಿಂದ ಸಾಗುವವರಿಗೆ ಮೀನಿನ ನೀರಿನ ಪ್ರೋಕ್ಷಣೆಯೂ ಪುಕ್ಕಟೆಯಾಗಿ ಸಿಗುತ್ತಿದೆ. ಇದನ್ನು ದಿನಾ ಕಾಣುವ ಬಡಾ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಸದಸ್ಯರು ಕಣ್ಣಿದ್ದೂ ಕುರುಡರಾಗಿದ್ದಾರೆ.
ಅದಾನಿ ಫೌಂಡೇಶನ್ ಸಂಸ್ಥೆಯವರು ಪರಿಸರದ ಗ್ರಾಮ ಪಂಚಾಯತ್ ಗಳಿಗೆ ಈಗಾಗಲೇ ಕೋಟ್ಯಾಂತರ ರೂಪಾಯಿ ಸಿ ಎಸ್ ಆರ್ ಅನುದಾನ ನೀಡಿದ್ದು, ಇದರಿಂದ ರಸ್ತೆ, ಮಾರುಕಟ್ಟೆ, ಸಹಿತ ಹತ್ತು ಹಲವು ಕಾಮಗಾರಿ ಮಾಡುತ್ತಿದೆ.
ಅದಾನಿ ಫೌಂಡೇಶನ್ ಬಡಾ ಗ್ರಾಮ ಪಂಚಾಯಿತಿಗಾಗಿ ಈಗಾಗಲೇ 1.51 ಕೋಟಿ ರೂಪಾಯಿ ಸಿಎಸ್ಆರ್ ಅನುದಾನದ ಹಲವಾರು ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಇದೀಗ ತರಕಾರಿ ಮಾರುಕಟ್ಟೆ ಮಾಡುವಂತೆ ಮಾಡಿರುವುದು ಗ್ರಾಮ ಪಂಚಾಯಿತಿಯ ತಪ್ಪು ನಿರ್ಣಯ ಆಗಿದ್ದು, ಇದರಿಂದ ಜನರಿಗೆ ಲಾಭವಂತೂ ಆಗುತ್ತಿಲ್ಲ. ಆದರೆ ಅದಾನಿ ಫೌಂಡೇಶನ್ ಸಂಸ್ಥೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದೇ ಹೇಳಬಹುದು.
ಪೊಲ್ಯ ರಸ್ತೆ ಅವ್ಯವಸ್ಥೆ :
ಇದೀಗ ಅದಾನಿ ಫೌಂಡೇಶನ್ ಖರ್ಚು ಮಾಡಿದ 17ಲಕ್ಷ ರೂ. ಹಣವನ್ನು ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಅತ್ಯಂತ ಹದಗೆಟ್ಟ ರಸ್ತೆ ಎಂದು ಕುಖ್ಯಾತಿ ಪಡೆದ ಪೊಲ್ಯ ರಸ್ತೆ ಮೀಸಲಿಡುತ್ತಿದ್ದರೆ, ಪೊಲ್ಯ ಪರಿಸರದ ಜನರು ಗ್ರಾಮ ಪಂಚಾಯತಿಗೆ ಮತ್ತು ಗ್ರಾಮ ಪಂಚಾಯತ್ ಸದಸ್ಯರಿಗೆ ಹಾಕುವ ಹಿಡಿಶಾಪವಾದರೂ ನಿಲ್ಲುತ್ತಿತ್ತು.

