1 ಕೋಟಿ 20 ಲಕ್ಷ ವೆಚ್ಚದ ಸ್ವರ್ಣ ಪಲ್ಲಕ್ಕಿ, ಗರ್ಭಗುಡಿಯ ಬಾಗಿಲಿಗೆ ಬೆಳ್ಳಿ ಹೊದಿಕೆ ಸಮರ್ಪಣೆ
ಪಡುಬಿದ್ರಿ ದೇಗುಲಕ್ಕೆ ವನದುರ್ಗಾ ಟ್ರಸ್ಟ್, ಬೇಂಗ್ರೆ ಶಿವಳ್ಳಿ ಬ್ರಾಹ್ಮಣರಿಂದ ಸಮರ್ಪಣೆ
(Padubidri) ಪಡುಬಿದ್ರಿ : ಪಡುಬಿದ್ರಿ ಶ್ರೀ ವನದುರ್ಗಾ ಟ್ರಸ್ಟ್, ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಆಡಳಿತ ಮಂಡಳಿಯ ವತಿಯಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ವೆಚ್ಚದಲ್ಲಿ ಸ್ವರ್ಣ ಪಲ್ಲಕ್ಕಿ ಹಾಗೂ ಶ್ರೀ ಮಹಾಗಣಪತಿ ದೇವರ ಗರ್ಭಗುಡಿಯ ಬಾಗಿಲಿಗೆ ಬೆಳ್ಳಿಯ ಹೊದಿಕೆ ಸಮರ್ಪಣೆಯ ಶೋಭಾ ಯಾತ್ರೆಯು ಏಪ್ರಿಲ್ 25ರ ಶನಿವಾರ ಸಂಜೆ 3:30 ನಡೆಯಲಿದೆ ಎಂದು ವನದುರ್ಗಾ ಟ್ರಸ್ಟ್ ಕಾರ್ಯದರ್ಶಿ ವೈ ಎನ್ ರಾಮಚಂದ್ರ ರಾವ್ ರವರು ಮಂಗಳವಾರ ಖಡ್ಗೇಶ್ವರಿ ಜ್ಞಾನ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಚಾಲನೆ ದೊರೆಯಲಿದೆ. ಶೋಭಾಯಾತ್ರೆಯು ಭಜನಾ ತಂಡ, ಚೆಂಡೆ ವಾದನದೊಂದಿಗೆ ಬ್ರಹ್ಮಸ್ಥಾನ ಮಾರ್ಗವಾಗಿ ಪೇಟೆಯ ಮೂಲಕ ಪಡುಬಿದ್ರಿ ದೇವಳಕ್ಕೆ ಸಾಗಿ ಬರಲಿದೆ.
ಶೋಭಾ ಯಾತ್ರೆಯ ಬಳಿಕ ಜರಗುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಪಲಿಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಆಶೀರ್ವಚನ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಪಡುಬಿದ್ರಿ ದೇವಳದ ತಂತ್ರಿಗಳಾದ ವೇದಮೂರ್ತಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ, ಜನಪದ ಸಂಶೋಧಕ ಕೆ.ಎಲ್. ಕುಂಡಂತಾಯ, ಪಡುಬಿದ್ರಿ ಮಠತ್ರಾಮಮನೆ ಗಂಗಾಧರ್ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಕ್ಷೇತ್ರದ ಅರ್ಚಕರಾದ ಎಚ್. ಪದ್ಮನಾಭ ಭಟ್, ವೈ. ಗುರುರಾಜ ಭಟ್, ಅನುವಂಶಿಕ ಮೊಕ್ತೇಸರರುಗಳಾದ ರತ್ನಾಕರ ರಾಜ ಅರಸು ಕಿನ್ನಕ್ಕ ಬಲ್ಲಾಳ್, ಪೇಟೆಮನೆ ಭವಾನಿ ಶಂಕರ್ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊರ್ನಾಯ ಪದ್ಮನಾಭ ರಾವ್ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ವನದುರ್ಗಾ ಟ್ರಸ್ಟ್ ನ ಕಾರ್ಯದರ್ಶಿ ರಾಮಚಂದ್ರ ರಾವ್ ವೈ. ಎನ್, ಒಂದನೇ ಗುರಿಕಾರ ಕೊರ್ನಾಯ ಪದ್ಮನಾಭ ರಾವ್, ಕೋಶಾಧಿಕಾರಿ ಸುರೇಶ್ ರಾವ್ ವೈ. ಎರಡನೇ ಗುರಿಕಾರ ನಟರಾಜ ಪಿ.ಎನ್, ಮೂರನೇ ಗುರಿಕಾರ ಮುರುಡಿ ಜಗದೀಶ್ ರಾವ್, ಟ್ರಸ್ಟ್ ಸದಸ್ಯರಾದ ಪಿ. ಶ್ರೀನಿವಾಸ್ ರಾವ್, ರವೀಂದ್ರ ಪಿ. ಎಚ್ ಉಪಸ್ಥಿತರಿದ್ದರು.

